





ಚೆನ್ನೈ: ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರು ಭಾರತೀಯ ಜನತಾ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು, ತಮಿಳುನಾಡಿನ ರಾಜಕೀಯ ದಿಕ್ಕು ಮತ್ತು ಪಕ್ಷದ ಕಾರ್ಯತಂತ್ರದ ಕುರಿತು ಪಕ್ಷದ ನಾಯಕತ್ವದೊಂದಿಗೆ ಉಂಟಾಗಿದ್ದ ಭಿನ್ನಾಭಿಪ್ರಾಯಗಳೇ ತಮ್ಮ ನಿರ್ಧಾರಕ್ಕೆ ಕಾರಣ ಎಂದು ಹೇಳಿದ್ದಾರೆ.ರಾಜೀನಾಮೆ ಬಳಿಕ ಮಾತನಾಡಿದ ಅವರು, ಪಕ್ಷಕ್ಕೆ ಹೊರೆಯಾಗಲು ಅಥವಾ ತೊಂದರೆ ಉಂಟುಮಾಡಲು ಬಯಸದ ಕಾರಣ ಬಿಜೆಪಿಯಿಂದ ಹೊರಬರುವ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.
‘ತಮಿಳುನಾಡಿನ ಕುರಿತು ನನ್ನ ಅಭಿಪ್ರಾಯಗಳು ಬಿಜೆಪಿ ನಾಯಕತ್ವದ ನಿಲುವಿನೊಂದಿಗೆ ಹೊಂದಿಕೆಯಾಗಲಿಲ್ಲ. ಈ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಕಳೆದ 18 ತಿಂಗಳುಗಳಲ್ಲಿ ಪಕ್ಷದ ಉನ್ನತ ನಾಯಕತ್ವದೊಂದಿಗೆ ಹಲವು ಬಾರಿ ಚರ್ಚೆ ನಡೆಸಿದ್ದೆ. ಆದರೆ, ಯಾವುದೇ ಒಮ್ಮತ ಮೂಡಲಿಲ್ಲ’ ಎಂದು ಅಣ್ಣಾಮಲೈ ತಮ್ಮ ರಾಜೀನಾಮೆ ಪತ್ರದಲ್ಲಿ ಹೇಳಿದ್ದಾರೆ.
ಬಿಜೆಪಿಯಿಂದ ಹೊರಬಂದ ಬಳಿಕವೂ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ತಮಗೆ ಗೌರವವಿದೆ ಎಂದು ಹೇಳಿರುವ ಅವರು, ತಮ್ಮ ರಾಜಕೀಯ ಪಯಣದುದ್ದಕ್ಕೂ ಪಕ್ಷದ ನಾಯಕತ್ವ ನೀಡಿದ ವಿಶ್ವಾಸ, ಅವಕಾಶ ಹಾಗೂ ಬೆಂಬಲಕ್ಕಾಗಿ ಕೃತಜ್ಞತೆ ಸಲ್ಲಿಸಿದ್ದಾರೆ. ರಾಜೀನಾಮೆಯ ಬೆನ್ನಲ್ಲೇ ಹಿರಿಯ ನಟ ರಜನೀಕಾಂತ್ ಅವರು ತಮ್ಮೊಂದಿಗೆ ಸೇರಿಕೊಳ್ಳುವಂತೆ ಮನವಿ ಮಾಡಿದ್ದರು ಎಂದು ಅಣ್ಣಾಮಲೈ ತಿಳಿಸಿದ್ದಾರೆ. ಆದರೆ, ತಾವು ಯಾವುದೇ ಪಕ್ಷವನ್ನು ಸೇರುವ ಉದ್ದೇಶ ಹೊಂದಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ಸ್ವಂತ ರಾಜಕೀಯ ಚಳುವಳಿಯನ್ನು ಆರಂಭಿಸುವುದಾಗಿ ಘೋಷಿಸಿದ್ದಾರೆ.
‘ತಮಿಳುನಾಡಿನ ರಾಜಕೀಯದಲ್ಲಿ ಹೊಸ ಹಾದಿಯನ್ನು ರೂಪಿಸಲು ಬಯಸಿದ್ದೇನೆ. ಸ್ವತಂತ್ರ ರಾಜಕೀಯ ಮಾರ್ಗವನ್ನು ನಿರ್ಮಿಸಲು ಅಗತ್ಯವಿದ್ದರೆ ಏಕಾಂಗಿಯಾಗಿ ಹೋರಾಡಲೂ ಸಿದ್ಧನಿದ್ದೇನೆ. ರಾಜ್ಯದ ರಾಜಕೀಯದಲ್ಲಿ ಮಹತ್ವದ ಬದಲಾವಣೆ ತರಬಲ್ಲ ಹೊಸ ರಾಜಕೀಯ ಚಳುವಳಿಗೆ ಚಾಲನೆ ನೀಡಲಿದ್ದೇನೆ’ ಎಂದು ಅಣ್ಣಾಮಲೈ ತಿಳಿಸಿದ್ದಾರೆ.








