Saturday, April 20, 2024
spot_imgspot_img
spot_imgspot_img

ಸ್ವಾತಂತ್ರೋತ್ಸವ :ಬಾಲ್ಯದ ನೆನಪುಗಳು.- ರಾಧಾಕೃಷ್ಣ ಎರುಂಬು

- Advertisement -G L Acharya panikkar
- Advertisement -

“ನ ಹಿ ಜ್ಞಾನೇನ ಸದ್ರಶಂ ಪವಿತ್ರಂ ಇಹ ವಿದ್ಯತೇ ತತ್ ಸ್ವಯಂ ಯೋಗ ಸಂಸಿದ್ದ: ಕಾಲೇನಾತ್ಮನೀ ವಿಂದತಿ “. ಹೀಗೆಂದು ಹೇಳಿರುವುದು ಸಂಸ್ಕೃತ ಶ್ಲೋಕ. ನಾವೆಲ್ಲರೂ ಇದನ್ನು ಅಪ್ಪಿ, ಒಪ್ಪಿ ಬಾಳಿ ಬದುಕಿದವರು. ಈಗೀಗ ಇವೆಲ್ಲ ಸಂಸ್ಕೃತ ವಿದ್ಯಾರ್ಥಿಗಳಿಗೆ ಮಾತ್ರವೆಂದು ಬಿಟ್ಟೇ ಬಿಟ್ಟಿದ್ದೇವೆ. ನಾವು ಕಲಿತ ಶಾಲೆಯ ಗೋಡೆಗಳೆಲ್ಲ ಇಂತಹ ಸುಭಾಷಿತ, ಶ್ಲೋಕಗಳನ್ನು ಹೊತ್ತ ಕೆಂಬಣ್ಣದ ವೃತ್ತಗಳಿಂದ ರಾರಾಜಿಸುತ್ತಿದ್ದವು. ಅವುಗಳನ್ನು ದಿನ ಓದುತಿದ್ದೆವು, ಆದ್ದರಿಂದಲೇ ನಡೆ ನುಡಿಗಳಲ್ಲಿ, ಸ್ಮೃತಿ ಪಟಲದಲ್ಲಿ ಮಾಸದೆ ಉಳಿದಿದೆ.


ನನಗೆ ನೆನಪಿದೆ 7ನೇ ತರಗತಿಗೆ ವರ್ಷಕ್ಕೆ ಕಟ್ಟಿದ ಶಾಲಾ ಶುಲ್ಕ ರೂಪಾಯಿ 47.75 ಅದು ತುಂಬಾ ಹಳೆಯ ಕಥೆಯಲ್ಲ 1992ರದ್ದು. ಆದರೆ ಅದನ್ನು ಕಟ್ಟುವುದಕ್ಕೂ ಮೀನಾ-ಮೇಷ ಎಣಿಸುತಿದ್ದ ಕಾಲ. ಪ್ರತಿ ಪರೀಕ್ಷೆಯ ಒಂದು ವಾರದ ಮುನ್ನ ರೂಪಾಯಿ 1.75ನ್ನು ಪರೀಕ್ಷಾ ಪೇಪರ್ ಗೆ ನೀಡುತಿದ್ದ ದುಡ್ಡು ಗುರುಗಳ ಉದ್ದದ ಸ್ಟೀಲ್ ಗ್ಲಾಸ್ಸ್ನೊಳಗೆ ಬೀಳುತಿದ್ದ ‘ಟಿನ್ ‘ಶಬ್ದ ಈಗಲೂ ಮರೆತು ಹೋಗಲಿಲ್ಲ. ಸ್ಥಳಾವಕಾಶ ಅಲ್ಪವಿದ್ದರೂ ತರಗತಿಯಲ್ಲಿ ಸೀಟು ಭರ್ತಿ.ಜಗಲಿಯಲ್ಲೂ ಪ್ರಾರ್ಥನೆಗೆ ಉದ್ದಕ್ಕೆ ನಿಲ್ಲಲು ಜಾಗವಿಲ್ಲದೆ 4 ಸಾಲುಗಳು. ಪರೀಕ್ಷೆಗೆ ಒಂದೇ ಬೆಂಚಲ್ಲಿ ನೇತಾಡಿಕೊಂಡೇ ಬರೆಯುತ್ತಿದ್ದುದು, ಮೈದಾನದ ತುಂಬೆಲ್ಲ ಒಂದೇ ರೈಲು ಬಂಡಿ ಆಟ ಇವೆಲ್ಲ ಮುಗಿಯದ ಅನುಭವಗಳು. ಶಾಲಾ ಕೀಲಿ-ಕೈ, ಶುಚಿತ್ವ, ದೇವರ ಗುಡಿ ಎಂಬ ಪವಿತ್ರತೆ ಹೊಂದಿದ ಗುರುಗಳ ಕೊಠಡಿ ಸ್ವಚ್ಛತೆ, ಬಾವಿಯ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಎಲ್ಲವೂ ನಮ್ಮದೇ ಉಸಾಬರಿಗಳು. ಇವೆಲ್ಲ ಬಾಲ್ಯದ ನೆನಪಿನ ಸೇಂಪುಲ್ಲುಗಳಷ್ಟೇ. ಆದರೆ ಒಂದಂತೂ ಸತ್ಯ ಈಗಲೂ ಮುಚ್ಚಿರುವ ಆ ಶಾಲೆಯ ಸಾಮಿಪ್ಯಕ್ಕೆ ಬಂದಾಗ ಹೃದಯ, ಮನಸ್ಸು ಪವಿತ್ರತೆಯಿಂದ ವಂದಿಸುತ್ತದೆ.


ಆದರೆ 26 ವರ್ಷಗಳ ಹಿಂದೆ ಮೂಡುತಿದ್ದ ಆ ಭಾವನೆಗಳೆಲ್ಲವನ್ನು ಶ್ರೀಮಂತಿಕೆ ನುಂಗಿ, ಪ್ರೆಸ್ಟೀಜ್ಗೆ ಮಣಿದು ನಮ್ಮ ಮಕ್ಕಳು ಹೈಟೆಕ್ ಸ್ಕೂಲ್ಗಳಲ್ಲಿ ಕಲಿಯಬೇಕು ಎಂದೆಲ್ಲ ಕನಸುಕಂಡು ಸಂಸ್ಕಾರವನ್ನು ಸಸಾರವಾಗಿಸಿ, ಯಾಂತ್ರಿಕ ಮನೋಭಾವನೆ ಸೃಷ್ಟಿ ಮಾಡಿಸುವ ಕೀರ್ತಿಯು ನಮ್ಮದೇ, ನಾಳೆ ನಮ್ಮನ್ನು ಆಶ್ರಮಕ್ಕೆ ಸೇರಿಸಲು ದಾರಿ ತಯಾರು ಮಾಡುತ್ತಿರುವುದು ನಾವೆ. ಈ ಎಲ್ಲ ಯೋಚನೆಗಳು ಬಂದಾಗ ಬೇಸರವಾಗುತ್ತದೆ ಹಾಗೆ ಹೇಳುವುದೇ ಬೇಡವೆನಿಸುತ್ತದೆ.

ನಾನು ಇಂದು ಬಯಸಿರುವುದು ನಮ್ಮ ಕಾಲದ ಸ್ವಾತಂತ್ರೋತ್ಸವದ ಸಂಭ್ರಮದ ನೆನಪುಗಳನ್ನು. ಈ ಹಿಂದೆ ಬರೆದಿರುವುದು ಅದಕ್ಕೆ ಪೀಠಿಕೆಯಷ್ಟೇ. ಸ್ವಾತಂತ್ರ್ಯ ಅದೇ ಆಗಸ್ಟ್ 15 ಸಮೀಪಿಸುತ್ತಿದ್ದಂತೆ ಮನಸಿನೊಳಗೆ ಏನೋ ಒಂದು ಕಾತರ. ಶುಕ್ರವಾರಅಪರಾಹ್ನದ 3.00 ರ ನಂತರದ ಚಟುವಟಿಕೆಯ ಅವಧಿ 2ವಾರ ಮುಂಚೆಯೇ ಪ್ರಾಕ್ಟೀಸ್ಗೆ ಮೀಸಲು, ತುಂಬಾ ನೋವು ತಂದಿರುವುದು ಅದಲ್ಲ ಎರಡು ವಾರ ಮೊದಲಿಂದಲೇ ದಿನ 3.45ರ ನಂತರದ ಆಟದ ಅವಧಿಯಲ್ಲಿ ಪ್ರಾಕ್ಟೀಸ್ ಮಾಡಿ ಅಂದಿರುವುದು. ಸ್ವಾತಂತ್ರಕ್ಕೆ ಹೋರಾಡಿದ ನಾಯಕರ ಬಗೆಗಿನ ತುಣುಕು ಪ್ರದರ್ಶನ, ಭಾಷಣ, ದೇಶ ಭಕ್ತಿ ಗೀತೆಗಳು ಹೀಗೆ ನಾವೇ ಮಾಡಿಕೊಂಡ ಆಯ್ಕೆಗಳು. ಗುರುಗಳು ಭಾಷಣ ಮಾಡಬೇಕೆಂದು ಸೂಚಿಸಿದರೆ ಎದೆಯಲ್ಲೇ ನಡುಕ ಶುರು, ಯಾಚನೆಗಾಗಿ ಮನೆ ಬಳಿಯ ವಿದ್ಯಾವಂತರ ಭೇಟಿ. ಸ್ಪರ್ಧೆಗಳೇನೇ ಇದ್ದರೂ ಬಹುಮಾನದ ಗೊಡವೆ ಇರಲಿಲ್ಲ, ಭಾಗವಹಿಸುವುದು ಮುಖ್ಯವಾಗಿತ್ತು. ವಾರದ ಹಿಂದೆಯೇ ಬಣ್ಣದ ಬಾವುಟ ರಚನೆಗೆ ಉಪಾದಿ. ಜೂನ್ ನಿಂದ ಆಗಸ್ಟ್ ವರೆಗೆ ಬಣ್ಣದ ವಸ್ತ್ರ ಧರಿಸಿ ಆಗಸ್ಟ್ ನಿಂದ ಸಮವಸ್ತ್ರ. ಹರಕು ಬಟ್ಟೆಯಾದರೂ ಕಳೆದ ಮಾರ್ಚ್ ನಿಂದ 10ಮಡಿಕೆ ಮಾಡಿ ಪೆಟ್ಟಿಗೆಯೊಳಗೆ ಸೇರಿದ ಅದು ಪರಿಮಳ ಹೊಂದಿ ಹೊರಬರುತ್ತಿದ್ದುದು ಆಗಸ್ಟ್ 14ರಂದೆ. ಇಸ್ತ್ರಿಪೆಟ್ಟಿಗೆ ಇಲ್ಲದೆ ಕುದಿಯುವ ನೀರನ್ನು ಟಿಫಿನ್ ಬಾಕ್ಸ್ಗೆ ಹಾಕಿ 14ರ ರಾತ್ರಿ ತಯಾರು ಮಾಡುತಿದ್ದುದರಲ್ಲೂ ಬಡತನದ ನೋವು ಬರುತ್ತಿಲಿಲ್ಲ. ಆ ಕ್ಷಣ ಎನಿಸಿದಾಗ ಇಂದಿಗೂ ಆನಂದ ಭಾಷ್ಪ ಹರಿಯುತ್ತದೆ.


ಆದರೆ ಇಂದಿನ ಮಕ್ಕಳು ಎಲ್ಲಾ ಇದ್ದರೂ ಸಂತೋಷ ಪಡೆದುಕೊಳ್ಳುವಲ್ಲಿ ಬಡಪಾಯಿಗಳಾಗೆ ಇರುತ್ತಿರುವುದು ದುಃಖ ತರುತ್ತದೆ. ಅವರಿವರು ನಮ್ಮ ಕಷ್ಟ ನೋಡಿ ದೇಣಿಗೆ ನೀಡಿದ ಮಾರ್ಕ್ದ್ ಸ್ಲಿಪ್ಪರ್ ಸ್ಪೆಷಲ್ ಆಗಿ ನೀರ ಸ್ನಾನ ಕಂಡಿರುವುದು ಆಗಸ್ಟ್ 15ರಂದೇ ಬೆಳಗಿನ ಜಾವ. ಹಿಂದಿನ ರಾತ್ರಿಯಿಡಿ ಮರುದಿನದ ಸಂಭ್ರಮದ ಕ್ಷಣಗಳ ಸವಿಯುತ್ತ ನಿದ್ದೆಯೇ ಬರುತ್ತಿರಲಿಲ್ಲ. ತಯಾರು ಮಾಡಿದ ಭಾಷಣದ ಚೀಟಿ ಆಗೊಮ್ಮೆ ಈಗೊಮ್ಮೆ ಕೈಗೆ ಬರುತಿದ್ದು ಭಾಷಣದ ಸಮಯಕ್ಕೆ ಆ ಚೀಟಿ ಚಿಪ್ಪಟೆ ಚೀರಾಗುತಿತ್ತು. ಈ ಸ್ಥಿತಿ ಕಂಡ ಹೆತ್ತವರು ಕಿಸಕ್ಕನೆ ನಗುತಿದ್ದಾಗ ಬಂದ ಮುಗುಳು ನಗು ಮರೆಯಲುಂಟೇ? ಬೆಳ್ಳಂಬೆಳಗ್ಗೆ ಎದ್ದು ಅಲ್ಲೂ ಇಲ್ಲೂ ಹುಡುಕಾಡಿ ಬಿಡಿ ಹೂ ಸಂಗ್ರಹಿಸಿ, ಆಗಸದೆತ್ತರದಿಂದ ಧ್ವಜ ತೆರೆದಾಗ ನನ್ನ ಹೂಗಳೇ ಹಾರಿ ನನ್ನ ಮೇಲೆ ಬೀಳಬೇಕೆಂಬ ಯೋಚನೆ ಸಣ್ಣ ವಿಷಯವಾದರೂ ಸತ್ಯವೇ. ಒಂದು ಕೈಯಲ್ಲಿ ಹೂವಿನ ಚೀಲ ಇನ್ನೊಂದರಲ್ಲಿ ಬಿದಿರಿನ ಓಟೆಗೆ ಅಂಟಿಸಿದ ರಟ್ಟಿನ ಬಾವುಟ ಕಿಸೆಗೊಂದು ಸ್ವರಚಿತ ಸಣ್ಣ ಧ್ವಜ, ತಲೆಗೆ ಎಣ್ಣೆ ಹಾಕಿ ಒಪ್ಪ ಓರಣ ಬಾಚಿ, ಸವಿ ಗಮ್ಮನೆ ಬರುವುದಕ್ಕೆ ಸ್ವಲ್ಪ ಪೌಡರ್ ಹಚ್ಚಿ ಹೊರಟ ಬಿರುಸು ಕಂಡ ಅವರಿವರು ಒಮ್ಮೆ ಗಲ್ಲ ಹಿಡಿದು ಅಲ್ಲಾಡಿಸುತ್ತಿದ್ದ ಖುಷಿ ಸಾವಿರ ಹೊನ್ನು ಕೊಟ್ಟರು ಸಿಗದು. ಗೆಳೆಯರೊಡನೆ ಜೈಕಾರದೊಂದಿಗೆ ಶಾಲಾ ಕ್ಯಾಂಪಸ್ ಪ್ರವೇಶ. ಒಂದಷ್ಟು ಹೆತ್ತವರು ಕೈಕಟ್ಟಿ ಶಾಲಾ ಜಗಲಿಯಲ್ಲಿ ಆಚೀಚೆ ನಡೆಯುತ್ತಿದ್ದರೆ ನಮ್ಮ ಮನೆಗೆ ನೆಂಟರು ಬಂದಷ್ಟೇ ಆತುರ. ಮಾತಾಡುವುದೇನು? ಕುಳಿತುಕೊಳ್ಳಲು ಹೇಳುವುದೇನು? ವ್ಯವಸ್ಥೆಯೇ ವ್ಯವಸ್ಥೆ. ನಮ್ಮ ಸಹಪಾಠಿಗಳಲ್ಲಿ ಕೆಲವರು ನ್ರತ್ಯಪಟುಗಳು, ಬಂದಾಗಲೇ ಗ್ರೀನ್ ರೂಮ್ನಲ್ಲಿ ರಿಹರ್ಸಲ್ ಅದನ್ನು ನೋಡಲು ಕಿಟಿಕಿಯ ಸಂದಿನಲ್ಲಿ ಇನ್ನೂ ಕೆಲವರು. ಆಗ ನಮ್ಮ ಗುರುಗಳು ಚಾಕಲೇಟು, ಲಡ್ಡು ಚೀಲ ಹಿಡಿದು ಬಂದರೆಂದರೆ ಗೇಟ್ ವರೆಗೂ ಓಡಿ, ಚಿನ್ನದ ಪೆಟ್ಟಿಗೆಯಂತೆ ಜೋಪಾನವಾಗಿ ತಂದು ಅಧ್ಯಾಪಕರ ಕೊಠಡಿಯಲ್ಲಿ ಇರಿಸುತಿದ್ದ ಆ ಬಾಗ್ಯ ಇನ್ನೆಂದು ಬಾರದು. ಯಾವಾಗಲೂ ಊದುತಿದ್ದ ಅಧ್ಯಾಪಕರ ಸೀಟಿ ಅಂದು ವಿಶೇಷ ಶಬ್ದ ಹೊರಡಿಸಿತ್ತು.

ಮೊದಲೇ ಬಣ್ಣ ಕಂಡಿದ್ದ ಧ್ವಜಸ್ತಂಭದ ಬಳಿ ಹಾಕಿದ್ದ ಸುಣ್ಣದ ಗೆರೆಗಳ ಮೇಲೆ ನಮ್ಮ ನಿಂತ ಭಂಗಿಗಳು, ಸಂಪ್ರದಾಯ ದಂತೆ ಊರ ಹಿರಿಯರಿಂದ ಧ್ವಜಾರೋಹಣ, ಭಾಷಣ, ಕ್ಲಾಸ್ ಲೀಡರ್ ರಿಪೋರ್ಟ್, ಸಲ್ಯೂಟ್ಗಳ ಪ್ರಾಮುಖ್ಯತೆ ಗೊತ್ತಿರದಿದ್ದರೂ ನಾವು ಮಾಡಿದ್ದು ನಿಜ. ಅಡಿಯಿಂದ ಮುಡಿಯವರೆಗೂ ಕೇಸರಿ ಬಿಳಿ ಹಸಿರು ಬಣ್ಣಗಳ ನಾಡೆ, ಬಳೆ, ಹೂ, ಧರಿಸಿದ ನಮ್ಮ ಸಹೋದರಿ ಮಣಿಗಳ ಎರಡು ಧ್ವಜ ಗೀತೆಗಳು ಆ ಕ್ಷಣವನ್ನು ಮಧುರವಾಗಿಸಿತು. ಇನ್ನೂ ಸಭಾ ಕಾರ್ಯಕ್ರಮ. ಮೊದಲೇ ತರಗತಿಯ ತಟ್ಟಿ ಸರಿಸಿ ಉದ್ದನೆಯ ಶಾಲಾ ಭವನ ತಯಾರಾಗಿಸಿದ್ದು ಶಿಸ್ತಿನಿಂದ ಕುಳಿತದ್ದಾಯ್ತು. ಮುಖ್ಯಗುರುಗಳು ಅತಿಥಿಗಳು ವೇದಿಕೆಯಲ್ಲಿ ಕುಳಿತರು. ಸಹಗುರುಗಳು ಕೆಲವರು ಹಾಡು ಹಾಡಿದರು, ಭಾಷಣ ಮಾಡಿದರು. ಈಗ ನಮ್ಮ ಸರದಿ. ಸಭೆಯ ಉದ್ದ ನೋಡಿ ಕಲಿತದ್ದು ಮರೆತು ಬಾಯಿ ಒಣಗಿತು, ಹರಿದ ಚೀಟಿ ಕೈಗೆ ಬಂತು, ಸ್ಟೇಜ್ ಏರಿ ನಿಂತಾಗ ದೇಹವೇ ನಡುಕ, ಮೊಣಕಾಲು ನಿಲ್ಲಲು ಬಿಡಲಿಲ್ಲ, ಚೀಟಿ ಆವೇಶ ಬಂದವರಂತೆ ನಡುಗುತ್ತ ಹೇಳಿದ್ದೇನು ಗೊತ್ತಿಲ್ಲ. ಒಂದೇ ಒಂದು ನೆನಪಿದೆ ಅದೇ ‘ಭಾರತ್ ಮಾತಾ ಕಿ ಜೈ ‘. ಬಳಿಕ ಎಲ್ಲರ ಸಾಂಸ್ಕೃತಿಕ ಕಾರ್ಯಕ್ರಮ ನಂತರ ಆ ದಿನದ ಸ್ಪೆಷಲ್ ಸಿಹಿತಿಂಡಿ ಹಂಚಿಕೆ.. ವಿತರಿಸಲು ನಾವೇ. 10 ಪೈಸೆಯ 2 ಚಾಕಲೇಟು ಆದರೂ ಅದರ ಸವಿ ಮಾಸಿಲ್ಲ. ತುಂಬಾ ಆಪ್ತರಿಗೆ 3 ಕೊಟ್ಟು ಚಾಕಲೇಟ್ ಕಮ್ಮಿ ಆದ ನೆನಪು ನಗು ತರುತಿದೆ. ಆ ಬಳಿಕ ಮೆರವಣಿಗೆ ಶಿಸ್ತಿನ ಸಿಪಾಯಿಗಳಂತೆ 2 ಲೈನ್ ಗಳಲ್ಲಿ ಅರ್ಧ ಕಿಲೋಮೀಟರು ಜೈಕಾರದೊಂದಿಗೆ ನಡೆದುದು. ಇಡೀ ಭಾರತದೊಳಗೆ ನಾವು ಮಾತ್ರ ಸ್ವಾತಂತ್ರ ಪಡೆದವರಂತೆ ನಮ್ಮ ಕಿರುಚಾಟ. ಮರಳಿ ಮನೆಗೆ ಬರುವಾಗ ಸ್ವರವಿಲ್ಲದೆ ತಾಕಲಾಟ.

ವಿಪರ್ಯಾಸ ವೆಂದರೆ ವರ್ತಮಾನದ ಸ್ಥಿತಿಯಲ್ಲಿ ನಮ್ಮ ಮಕ್ಕಳಿಗೆ ಈ ಅವಕಾಶಗಳೇ ಇಲ್ಲದಿರುವುದು. ಹೆಚ್ಚಾಗಿ ನಮ್ಮ ಮಕ್ಕಳ ಮನಸ್ಥಿತಿಯು ಅದಕ್ಕೆ ಪೂರಕವಾಗಿಲ್ಲವೊ ಅನಿಸುತಿದೆ. ಲಕ್ಸುರಿ ಜೀವನದಲ್ಲಿ ಈ ಅನುಭವಗಳು ಖಂಡಿತ ಇಲ್ಲ, ಹೆಚ್ಚಾಗಿ ಈಗಿನ ಶಾಲಾ ದಿನಚರಿಯಲ್ಲಿ ಅಷ್ಟೊಂದು ಸಮಯವೂ ಅವಕಾಶವೂ ಇಲ್ಲ.ಆದರೂ ಸರಕಾರ ಮಕ್ಕಳಿಗೆ ಆನಂದಿಸಲು ಅವಕಾಶ ನೀಡಬೇಕು ಎನ್ನುತ್ತದೆ ಹತ್ತು ಹಲವು ನಿಬಂಧನೆಗಳ ಜೊತೆಯಲ್ಲಿ. ಅಂತೂ ನಮ್ಮನ್ನೆಲ್ಲ ಸ್ವತಂತ್ರವಾಗಿ ಇರಲು ಯತ್ನಿಸುವ ಯೋಧರ ಸೇವೆಯನ್ನು ನಾವು ಸದಾ ನೆನಪಿಸಬೇಕು. ಅದಕ್ಕಾಗಿಯಾದರೂ ಈ ಉತ್ಸವ ಮೀಸಲಾಗಿರಲಿ.
ಈ ವರ್ಷವಂತೂ ಮುಖ ಬಾಯಿ ಮುಚ್ಚಿಕೊಂಡು, ಮಕ್ಕಳು ಮನೆಯಲ್ಲಿ ಗುರುಗಳು ಶಾಲೆಯಲ್ಲಿ ಅಂತರ ಕಾಯ್ದುಕೊಂಡೆ ಆಚರಿಸುವ ಅವಕಾಶವಾದರೂ ಸಿಗಬಹುದೇನೋ?..

ರಾಧಾಕೃಷ್ಣ ಎರುಂಬು
ಆಡಳಿತಾಧಿಕಾರಿಗಳು ವಿಟ್ಲ ಜೇಸಿ ವಿದ್ಯಾ ಸಂಸ್ಥೆ.
ರಾಮ್-ದೇವ್ ವಿಟ್ಲ

- Advertisement -

Related news

error: Content is protected !!