





ವಿಟ್ಲ: ಶ್ರೀ ದೇವತಾ ಸಮಿತಿ ವಿಟ್ಲ ದ.ಕ. ಆಶ್ರಯದಲ್ಲಿ 53ನೇ ವರ್ಷದ ವಿಟ್ಲ ಶಾರದೋತ್ಸವ ಕಾರ್ಯಕ್ರಮವು ಅ.09ನೇ ಬುಧವಾರದಿಂದ 13ನೇ ಆದಿತ್ಯವಾರದವರೆಗೆ ವಿಟ್ಲದ ಶ್ರೀ ಅನಂತೇಶ್ವರ ದೇವಸ್ಥಾನದ “ಶ್ರೀ ಅನಂತ ಸದನ”ದಲ್ಲಿ ವಿಜೃಂಭಣೆಯಿಂದ ನಡೆಯಲಿದೆ.
ದಿನಾಂಕ 09-10-2024ನೇ ಬುಧವಾರದಂದು ಬೆಳಗ್ಗೆ ಗಂಟೆ 7:00ಕ್ಕೆ ಗಣಪತಿ ಹವನ ನಡೆದು ಬಳಿಕ 8:00ಕ್ಕೆ ಶ್ರೀ ಅನಂತೇಶ್ವರ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆ ನಡೆಯಲಿದೆ. 8:30ಕ್ಕೆ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆ ನಡೆದು 9:00ಕ್ಕೆ ಶ್ರೀ ಮಾತೆಯ ವಿಗ್ರಹವನ್ನು ಶ್ರೀ ಚಂದ್ರನಾಥ ಸ್ವಾಮಿ ಜೈನ ಬಸದಿಯಿಂದ ಉತ್ಸವದ ಸ್ಥಳಕ್ಕೆ ಪ್ರತಿಷ್ಠಾ ವಿಧಿ ಕಾರ್ಯಕ್ರಮಕ್ಕೆ ಮೆರವಣಿಗೆಯಲ್ಲಿ ತರುವುದು. ಬಳಿಕ 10:20ಕ್ಕೆ ವೇದಮೂರ್ತಿ ಶ್ರೀ ಎಂ. ವಿಕಾಸ್ ಭಟ್, ಪುರೋಹಿತರು, ಶ್ರೀರಾಮ ಮಂದಿರ ಹನುಮಗಿರಿ ವಿಟ್ಲ ಇವರಿಂದ ಶ್ರೀ ಮಾತೆಯ ವಿಗ್ರಹ ಪ್ರತಿಷ್ಠೆ ನಡೆದು ಶ್ರೀ ದೇವತಾ ಸಮಿತಿ, ವಿಟ್ಲ ಇದರ ಗೌರವಾಧ್ಯಕ್ಷ ಎಂ. ರಾಧಾಕೃಷ್ಣ ಧ್ವಜಾರೋಹಣ ನೆರವೇರಿಸಲಿದ್ದಾರೆ. ಕಾರ್ಯಕ್ರಮವನ್ನು ಬಂಗಾರು ಅರಸರು, ವಿಟ್ಲ ಅರಮನೆ ಆನುವಂಶಿಕ ಮೊಕ್ತೇಸರರು, ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವಿಟ್ಲ, ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನರ್ಸಪ್ಪ ಪೂಜಾರಿ ನಿಡ್ಯ, ಅಧ್ಯಕ್ಷರು ಶ್ರೀ ದೇವತಾ ಸಮಿತಿ ವಿಟ್ಲ ಇವರು ವಹಿಸಲಿದ್ದಾರೆ. ಶಂಕರ ನಾರಾಯಣ ಭಟ್ ಕಲ್ಲಕಟ್ಟ, ಬಾಲಗೋಕುಲ ಕಾಸರಗೋಡು ಜಿಲ್ಲಾ ರಕ್ಷಾಧಿಕಾರಿ, ಜಿತೇಶ್, ಶ್ರೀ ಚಂದ್ರನಾಥ ಜೈನ ಬಸದಿ ವಿಟ್ಲ, ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಹರೀಶ್ C.H. ಅಧ್ಯಕ್ಷರು ರೋಟರಿ ಕ್ಲಬ್ ವಿಟ್ಲ, ಸಂಗೀತ ಜಗದೀಶ್ ಪಾಣೆಮಜಲು, ಉಪಾಧ್ಯಕ್ಷರು, ವಿಟ್ಲ ಪಟ್ಟಣ ಪಂಚಾಯತ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ ಗಂಟೆ 1:00ಕ್ಕೆ ಮಹಾಪೂಜೆ , ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.
ಸಂಜೆ 7:00ಕ್ಕೆ “ಸುಧಾತನಯ” ನಾಮಾಂಕಿತ ವೇದಮೂರ್ತಿ ಶ್ರೀ ವಿಜಯ್ ಕುಮಾರ್ ಭಟ್ ಮತ್ತು ಬಳಗ ಶ್ರೀ ಸಾರಸ್ವತ ಭಜನಾ ಮಂಡಳಿ ವಿಟ್ಲ ಇವರಿಂದ ’ಭಜನ್ ಸಂಧ್ಯಾ’ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಲಿದೆ. ರಾತ್ರಿ ಗಂಟೆ 9:30ಕ್ಕೆ ಪ್ರಸನ್ನ ಪೂಜೆ, ಪ್ರಸಾದ ವಿತರಣೆ ನಡೆಯಲಿದೆ.
ದಿನಾಂಕ 10-10-2024ನೇ ಗುರುವಾರ ಪೂರ್ವಾಹ್ನ ಗಂಟೆ 7:00ಕ್ಕೆ ಪ್ರಸನ್ನ ಪೂಜೆ, 10:00ಕ್ಕೆ ಸಂಗೀತ ಸ್ಪರ್ಧೆ (ಭಕ್ತಿಗೀತೆಗಳು ಮಾತ್ರ ) ಬಳಿಕ 11:30ಕ್ಕೆ ವಂದೇ ಮಾತರಂ ( ಕಂಠಪಾಠ ) ಬಳಿಕ 12:00ಕ್ಕೆ ದೇವರ ಚಿತ್ರ ರಚನೆ ( ಪೆನ್ಸಿಲ್‌ನಲ್ಲಿ ಮಾತ್ರ ) ನಡೆಯಲಿದೆ. ಮಧ್ಯಾಹ್ನ ಗಂಟೆ 1:00ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆದು ಬಳಿಕ 3:00ಕ್ಕೆ ರಂಗವಲ್ಲಿ ಸ್ಪರ್ಧೆ ನಡೆಯಲಿದೆ. ಸಂಜೆ 6:00ರಿಂದ 7:15ರವರೆಗೆ ಜಿ.ಎಸ್.ಬಿ. ಶ್ರೀರಾಮ ಭಜನಾ ಮಂಡಳಿ ಶ್ರೀ ರಾಮಮಂದಿರ ಹನುಮಗಿರಿ, ವಿಟ್ಲ ಇವರಿಂದ “ಹರಿನಾಮ ಸಂಕೀರ್ತನೆ” ನಡೆದು 7:30ರಿಂದ 9:00ರವರರೆಗೆ ಸಂತೋಷ್ ವಿಟ್ಲ ಇವರಿಂದ “ಕೊಳಲುವಾದನ” ನಡೆಯಲಿದೆ. ರಾತ್ರಿ ಗಂಟೆ 9:30ಕ್ಕೆ ಪ್ರಸನ್ನ ಪೂಜೆ, ಪ್ರಸಾದ ವಿತರಣೆ ನಡೆಯಲಿದೆ.
ದಿನಾಂಕ 11-10-2024ನೇ ಶುಕ್ರವಾರದಂದು ಪೂರ್ವಾಹ್ನ ಗಂಟೆ 7:00ಕ್ಕೆ ಪ್ರಸನ್ನ ಪೂಜೆ ನಡೆದು ಬಳಿಕ 10:00ಕ್ಕೆ ಭಗವದ್ಗೀತಾ ಅಧ್ಯಾಯ 15ರ ಮೊದಲ 10 ಶ್ಲೋಕಗಳ ಗೀತಾ ಕಂಠಪಾಠ ಸ್ಪರ್ಧೆ ನಡೆಯಲಿದೆ. 11:30ಕ್ಕೆ ಹೂಹಾರ ಸ್ಪರ್ಧೆ ( ಈ ಸ್ಪರ್ಧೆಗೆ ಬೇಕಾದ ವಸ್ತುಗಳನ್ನು ಸ್ಪರ್ಧಿಗಳೇ ತರಬೇಕು ) ನಡೆಯಲಿದೆ. ಮಧ್ಯಾಹ್ನ ಗಂಟೆ 1:00ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆದು ಬಳಿಕ 3:00ಕ್ಕೆ ಶ್ರೀ ರಾಮ ಜನ್ಮಭೂಮಿಯ ಪ್ರಾಣ ಪ್ರತಿಷ್ಠೆ ವಿಷಯದ ಕುರಿತು ಪ್ರಬಂಧ ಸ್ಪರ್ಧೆ ನಡೆಯಲಿದೆ. ಸಂಜೆ 6:00ಕ್ಕೆ ವಿಶೇಷ ದೀಪಾಲಂಕಾರದೊಂದಿಗೆ “ರಂಗಪೂಜೆ” ನಡೆದ ನಂತರ 7:00ಕ್ಕೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ರಾಜೇಶ್ ವಿಟ್ಲ ಸಾರಥ್ಯದ ಆರ್.ಕೆ. ಕುಣಿತ ಭಜನಾ ತಂಡ, ವಿಟ್ಲ ಇವರಿಂದ “ಕುಣಿತ ಭಜನೆ” ನಡೆಯಲಿದೆ. ರಾತ್ರಿ ಗಂಟೆ 9:00ಕ್ಕೆ ಪ್ರಸನ್ನ ಪೂಜೆ, ಪ್ರಸಾದ ವಿತರಣೆ ನಡೆಯಲಿದೆ.
ದಿನಾಂಕ 12-10-2024ನೇ ಶನಿವಾರದಂದು ಬೆಳಿಗ್ಗೆ ಗಂಟೆ 7:00ಕ್ಕೆ ಪ್ರಸನ್ನ ಪೂಜೆ ನಡೆದು ಬಳಿಕ 10:00ಕ್ಕೆ ಛದ್ಮವೇಷ ಸ್ಪರ್ಧೆ- 15 ವರ್ಷದ ಒಳಗಿನವರಿಗೆ ( ದೇವತೆಗಳು ಮತ್ತು ಭಾರತದ ಮಹಾಪುರುಷರ ವೇಷಗಳು ಮಾತ್ರ ) ನಡೆಯಲಿದೆ. ಮಧ್ಯಾಹ್ನ ಗಂಟೆ 1:00ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 7:00ಕ್ಕೆ ಅರವಿಂದ ಆಚಾರ್ಯ ಮಾಣಿಲ ಮತ್ತು ಬಳಗ ಇವರಿಂದ “ದಾಸವಾಣಿ” ಕಾರ್ಯಕ್ರಮ ನಡೆಯಲಿದೆ. ರಾತ್ರಿ ಗಂಟೆ 9:30ಕ್ಕೆ ಪ್ರಸನ್ನ ಪೂಜೆ, ಪ್ರಸಾದ ವಿತರಣೆ ನಡೆಯಲಿದೆ.
ದಿನಾಂಕ 13-10-2024ನೇ ಆದಿತ್ಯವಾರ ವಿಜಯದಶಮಿಯಂದು ಬೆಳಿಗ್ಗೆ ಗಂಟೆ 7:00ಕ್ಕೆ ಪ್ರಸನ್ನ ಪೂಜೆ ನಡೆದು ಬಳಿಕ 8:00ಕ್ಕೆ ಅಕ್ಷರ ಅಭ್ಯಾಸ ನಡೆಯಲಿದೆ. ಬಳಿಕ 11:30ಕ್ಕೆ ನರ್ಸಪ್ಪ ಪೂಜಾರಿ ನಿಡ್ಯ, ಅಧ್ಯಕ್ಷರು ಶ್ರೀ ದೇವತಾ ಸಮಿತಿ ವಿಟ್ಲ ಇವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಯಲಿದೆ. ಅಶೋಕ್ ಶೆಟ್ಟಿ ಸರಪಾಡಿ, ಯಕ್ಷಗಾನ ಕಲಾವಿದರು ಮತ್ತು ಗೌರವಾಧ್ಯಕ್ಷರು ಸಂಸ್ಕಾರ ಭಾರತಿ ದ.ಕ. ಜಿಲ್ಲೆ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಸ್ಪರ್ಧಾ ವಿಜೇತರಿಗೆ ರಜಿತ್ ಆಳ್ವ ಅಧ್ಯಕ್ಷರು, ಲಯನ್ಸ್ ಕ್ಲಬ್, ವಿಟ್ಲ, ಮತ್ತು ಕರುಣಾಕರ ಗೌಡ, ಅಧ್ಯಕ್ಷರು ಪಟ್ಟಣ ಪಂಚಾಯತು ವಿಟ್ಲ ಬಹುಮಾನ ವಿತರಿಸಲಿದ್ದಾರೆ. ಮಧ್ಯಾಹ್ನ ಗಂಟೆ 1:00ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ವಿಸರ್ಜನಾ ಆರತಿ, ಅನ್ನಸಂತರ್ಪಣೆ ನಡೆದ ನಂತರ 3:00ಕ್ಕೆ ಕರ್ನಾಟಕ ಕಲಾಶ್ರೀ ಡಾ| ಪ.ಕೆ. ದಾಮೋದರ್ ಮತ್ತು ಬಳಗದವರಿಂದ “ವಾದ್ಯಗೋಷ್ಠಿ” ನಡೆಯಲಿದೆ. ಸಂಜೆ ಗಂಟೆ 4:30ಕ್ಕೆ ಆಕರ್ಷಕ ಸ್ತಬ್ಧ ಚಿತ್ರದೊಂದಿಗೆ ಶ್ರೀ ದೇವಿಯ ವೈಭವದ ಶೋಭಾಯಾತ್ರೆ ನಡೆದ ಬಳಿಕ ಶ್ರೀ ಅನಂತೇಶ್ವರ ದೇವಸ್ಥಾನದ ಕೆರೆಯ ಬಳಿ ಪೂಜೆ, “ವಂದೇ ಮಾತರಂ”, “ಧ್ವಜಾವತರಣ” ನಡೆದ ನಂತರ ಕೆರೆಯಲ್ಲಿ ಶ್ರೀ ದೇವಿಯ ವಿಗ್ರಹ ವಿಸರ್ಜನೆ ನಡೆಯಲಿದೆ.