ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ವಿಶ್ವಕಪ್ ನಲ್ಲಿ ಆಸ್ಟ್ರೇಲಿಯಾ ತಂಡವು ಭಾರತ ತಂಡವನ್ನು ಮಣಿಸುವ ಮೂಲಕ ವಿಶ್ವಕಪ್ ಗೆದ್ದು, ಕ್ರಿಕೆಟ್ ಜಗತ್ತಿನಲ್ಲಿ ಬಲಿಷ್ಠ ತಂಡವಾಗಿ ಹೊರ ಹೊಮ್ಮಿದೆ. ಫೈನಲ್ ಪಂದ್ಯ ಗೆದ್ದ ಆಸ್ಟ್ರೇಲಿಯಾ ಆಟಗಾರರ ಸಂಭ್ರಮ ಮುಗಿಲು ಮುಟ್ಟಿತ್ತು. ಆದರೆ ಈ ನಡುವೆ ಕ್ರಿಕೆಟಿಗ ಮಿಚೆಲ್ ಮಾರ್ಷ್ ಕಪ್ ಗೆ ಅವಮಾನ ಮಾಡಿದ ಪ್ರಕರಣ ನಡೆದಿದೆ.
ಆಸ್ಟ್ರೇಲಿಯಾ ಆಟಗಾರ ಮಿಚೆಲ್ ಮಾರ್ಷ್ ವಿಶ್ವಕಪ್ ಟ್ರೋಫಿ ಮೇಲೆ ಕಾಲಿಟ್ಟು ಸಂಭ್ರಮಿಸುತ್ತಿದ್ದು, ಟ್ರೋಫಿ ಗೆದ್ದ ಕೆಲವೇ ಗಂಟೆಗಳ ನಂತರ ಈ ಚಿತ್ರವನ್ನು ಹಂಚಿಕೊಳ್ಳಲಾಗಿದೆ. ಈ ಫೋಟೋವನ್ನು ಆರಂಭದಲ್ಲಿ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮ್ಮಿನ್ಸ್ ಅವರು ತಮ್ಮ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನಂತರ ಕಮ್ಮಿನ್ಸ್ ಫೋಟೋ ಶೇರ್ ಮಾಡುತ್ತಿದ್ದಂತೆಯೇ ಇದು ಭಾರೀ ವೈರಲ್ ಆಗಿದ್ದು, ಟ್ರೋಫಿಗೆ ಅಗೌರವ ಸೂಚಿಸಿರುವ ಆಟಗಾರನ ವಿರುದ್ಧ ಕ್ರಿಕೆಟ್ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.
ಇನ್ನು ಈ ಟ್ರೋಫಿಗಾಗಿ ಸಾಕಷ್ಟು ದೇಶಗಳು ಶ್ರಮಪಟ್ಟು ಆಟವಾಡಿವೆ, ಹಾಗೂ ಕೋಟ್ಯಂತರ ಜನರು ಈ ಫೈನಲ್ ಪಂದ್ಯಾವಳಿಯನ್ನು ಕಾತುರದಿಂದ ವೀಕ್ಷಿಸುತ್ತಿದ್ದರು. ಆದರೆ ಈಗ ಆಸ್ಟ್ರೇಲಿಯಾ ಆಟಗಾರ ಕಪ್ ಮೇಲೆ ಕಾಲಿಟ್ಟು ಕುಳಿತಿರುವುದು ದುರಹಂಕಾರದ ವಿಷಯ ಎಂದು ಆಕ್ರೋಶ ವ್ಯಕ್ತವಾಗಿದೆ.