ಬೆಂಗಳೂರು: ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಡಿಸುವುದಾಗಿ ನಂಬಿಸಿ ವಂಚನೆ ಮಾಡುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಎಂ ಹರಿನಾಡರ್ ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ವೆಂಕಟರಮಣಿ ಎಂಬುವರಿಗೆ 360 ಕೋಟಿ ಸಾಲ ಕೊಡಿಸುವುದಾಗಿ ನಂಬಿಸಿ ವಂಚನೆ ಮಾಡಿದ್ದ ಈತ ಸಾಲ ಕೊಡಿಸಲು 7.20 ಕೋಟಿ ಹಣ ಪಡೆದುಕೊಂಡಿದ್ದನು. ನಂತರ ವಂಚನೆ ಬೆಳಕಿಗೆ ಬರುತ್ತಿದ್ದಂತೆಯೇ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಬಳಿಕ ಪ್ರಕರಣವನ್ನ ಸಿಸಿಬಿ ಗೆ ವರ್ಗಾವಣೆ ಮಾಡಲಾಗಿತ್ತು. ಪ್ರಕರಣದ ತನಿಖೆ ಕೈಗೆತ್ತಿಕೊಂಡ ಸಿಸಿಬಿ ಆರೋಪಿಯನ್ನ ಕೇರಳದಲ್ಲಿ ಬಂಧನ ಮಾಡಿದೆ. ಈತನಿಂದ ಎರಡು ಕೋಟಿ ಮೌಲ್ಯದ 3.893 ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಜತೆಗೆ ಎಂಟು ಲಕ್ಷಕ್ಕೂ ಅಧಿಕ ನಗದು ಹಾಗೂ ಒಂದು ಇನೋವಾ ಕಾರು ವಶಕ್ಕೆ ಪಡೆಯಲಾಗಿದೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ರಂಜಿತ್ ಪಣಿಕ್ಕರ್ ಎಂಬಾತನನ್ನು ಸಿಸಿಬಿ ಈ ಮೊದಲೇ ಬಂಧಿಸಿತ್ತು. ಈತನಿಂದ ಒಂದು ಸಫಾರಿ ಕಾರು, ಹತ್ತು ಲಕ್ಷ ಮೌಲ್ಯದ ಚಿನ್ನಾಭರಣ , 96 ಸಾವಿರ ನಗದು, 38 ಲಕ್ಷ ಹಣವನ್ನು ಬ್ಯಾಂಕ್ ಖಾತೆಯಿಂದ ಸೀಜ್ ಮಾಡಿಕೊಳ್ಳಲಾಗಿತ್ತು.

ಕುತೂಹಲದ ವಿಷಯ ಎಂದರೆ, ಹರಿನಾಡರ್ ಏಪ್ರಿಲ್ ನಾಲ್ಕರಂದು ನಡೆದ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದನು. ಹಳ್ಳಾಗುಳಂ ಕ್ಷೇತ್ರದಿಂದ ಚುನಾವಣೆ ಸ್ಪರ್ಧಿಸಿದ್ದು, ಈತನಿಗೆ 37 ಸಾವಿರ ಮತಗಳು ಬಂದಿದ್ದವು.

ತಮಿಳು ನಾಡಿನಲ್ಲಿ ತನ್ನದೆ ಅದ ದೊಡ್ಡ ಮಟ್ಟದ ಫಾಲೋವರ್ ಹೊಂದಿರುವ ಹರಿನಾಡರ್ ಸದ್ಯ ಬೆಂಗಳೂರು ಸಿಸಿಬಿ ಪೊಲೀಸರ ವಶದಲ್ಲಿದ್ದಾನೆ.


