

ಬೆಂಗಳೂರು: ತನ್ನ ಊರಿನಿಂದ ಪಂಚೆ ಹಾಕಿಕೊಂಡು ಬಸ್‍ನಲ್ಲಿ ಬಂದು ಟಿವಿಎಸ್ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿ 5.20 ಲಕ್ಷ ರೂ. ಬೆಲೆ ಬಾಳುವ 10 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಗುಬ್ಬಿ ತಾಲೂಕು ಸಿಎಸ್ ಪುರ ನಿವಾಸಿ ಶ್ರೀನಿವಾಸ್ ಅಲಿಯಾಸ್ ಸೀನಾ (40) ಬಂಧಿತ ಆರೋಪಿ. ಈತನಿಗೆ ಗೇರ್ ಗಾಡಿ ಓಡಿಸಲು ಬರುವುದಿಲ್ಲ. ಹಾಗಾಗಿ ಟಿವಿಎಸ್ ದ್ವಿಚಕ್ರ ವಾಹನಗಳನ್ನೇ ಕಳ್ಳತನ ಮಾಡುತ್ತಿದ್ದನು. ತನ್ನ ಊರಿನಿಂದ ಪಂಚೆ ಹಾಕಿಕೊಂಡು ಬಸ್‍ನಲ್ಲಿ ನಗರಕ್ಕೆ ಬಂದು ಕಾಮಾಕ್ಷಿಪಾಳ್ಯ ಪೊಲೀಸ್ ವ್ಯಾಪ್ತಿಯಲ್ಲಿ ರಾತ್ರಿ ವೇಳೆ ಸುತ್ತಾಡುತ್ತಾ ಸುತ್ತಿಗೆ ಮತ್ತು ರಾಡ್ ಬಳಸಿ ವಾಹನಗಳ ಲಾಕ್ ತೆಗೆದು ಟಿವಿಎಸ್ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದನು.
ಮನೆ ಮುಂಭಾಗ ನಿಲ್ಲಿಸಿದ್ದ ಟಿವಿಎಸ್ ಕಳ್ಳತನವಾಗಿದೆ ಎಂದು ಸ್ಥಳೀಯ ವ್ಯಕ್ತಿಯೊಬ್ಬರು ಕಾಮಾಕ್ಷಿಪಾಳ್ಯ ಠಾಣೆಗೆ ದೂರು ನೀಡಿದ್ದರು. ಇನ್ಸ್ ಸ್ಪೆಕ್ಟರ್ ಪ್ರಶಾತ್ ಹಾಗೂ ಸಿಬ್ಬಂದಿ ಪ್ರಕರಣ ದಾಖಲಿಸಿಕೊಂಡು,
ತನಿಖೆ ಕೈಗೊಂಡು ಕಳ್ಳತನ ನಡೆದ ಸುತ್ತಮುತ್ತಲಿನ ಸಿಸಿಟಿವಿಗಳನ್ನು ಪರಿಶೀಲಿಸಿ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯಿಂದ 9 ಟಿವಿಎಸ್ ಹಾಗೂ ಒಂದು ಸ್ಕೂಟರ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.










