


ಬಂಟ್ವಾಳ: ಎರಡು ಬೈಕ್ ಗಳ ನಡುವೆ ನಡೆದ ಭೀಕರ ಅಪಘಾತದಲ್ಲಿ ಛಾಯಾಗ್ರಾಹಕ ಸಾವನ್ನಪ್ಪಿದ ಘಟನೆ ಬಿ.ಸಿ.ರೋಡ್ ನ ಪಾಣೆಮಂಗಳೂರು ಎಂಬಲ್ಲಿ ನಡೆದಿದೆ.
ಶಂಭೂರು ನಿವಾಸಿ ರಕ್ಷಿತ್ ಶೆಟ್ಟಿ (43) ಅಪಘಾತದಲ್ಲಿ ಮೃತಪಟ್ಟವರು. ನಿನ್ನೆ(ಮಾ.13) ರಾತ್ರಿ ಪಾಣೆಮಂಗಳೂರು ಎಂಬಲ್ಲಿ ಎರಡು ಬೈಕ್ ಗಳ ನಡುವೆ ಅಪಘಾತ ನಡೆದಿದ್ದು, ಗಂಭೀರವಾಗಿ ಗಾಯಗೊಂಡಿದ್ದ ರಕ್ಷಿತ್ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿರುವುದು ತಿಳಿದುಬಂದಿದೆ.
ಛಾಯಾಗ್ರಾಹಕ ಸಂಘದ ಬಂಟ್ವಾಳ ವಲಯದ ಸಕ್ರಿಯ ಸದಸ್ಯರಾಗಿದ್ದ ರಕ್ಷಿತ್ ಅವರು ಅತ್ಯುತ್ತಮ ವಿಡಿಯೋಗ್ರಾಫರ್ ಆಗಿದ್ದರು. ರಕ್ಷಿತ್ ಅವರ ಮಗಳ 10 ನೇ ವರ್ಷದ ಹುಟ್ಟು ಹಬ್ಬದ ಕಾರ್ಯಕ್ರಮವನ್ನು ನಾಳೆ(ಮಾ.15) ಮನೆಯಲ್ಲಿ ನಡೆಸಲು ತಯಾರಿ ಮಾಡಲಾಗಿತ್ತು. ಮಗಳ ಹುಟ್ಟು ಹಬ್ಬದ ಸಂಭ್ರಮದ ಮನೆಯೀಗ ತಂದೆಯ ಸಾವಿನಿಂದ ಮೌನವಾಗಿದೆ.
ರಕ್ಷಿತ್ ಸಹೋದರ ಕೂಡ ಸುಮಾರು ವರ್ಷಗಳ ಹಿಂದೆ ನಡೆದ ಅಪಘಾತದಲ್ಲಿ ಗಾಯಗೊಂಡು ಮಲಗಿದ ಸ್ಥಿತಿಯಲ್ಲಿ ಮನೆಯಲ್ಲಿದ್ದಾರೆ. ಅತ್ಯಂತ ಬಡ ಕುಟುಂಬ ಇದೀಗ ಆಧಾರಸ್ತಂಭವಿಲ್ಲದೆ ಕಂಗಲಾಗಿದೆ ಎಂದು ವರದಿ ಮೂಲಕ ತಿಳಿದುಬಂದಿದೆ.








