

ಬೆಳ್ತಂಗಡಿ: ಟಿಪ್ಪರ್ ಚಾಲಕನ ಅತಿವೇಗದ, ನಿರ್ಲಕ್ಷ್ಯದ ಚಾಲನೆಯಿಂದ ಸರಣಿ ಅಪಘಾತ ನಡೆದ ಘಟನೆ ಬೆಳ್ತಂಗಡಿಯ ಭಾರತ್ ಶೋರೂಂ ಬಳಿ ಅಪಘಾತ ನಡೆದಿದೆ. ವೇಗದ ಚಾಲನೆಯಿಂದ ಟಿಪ್ಪರ್ – ಎರಡು ಬಸ್, ನಾಲ್ಕು ಕಾರು, ಒಂದು ಆಟೋ ರಿಕ್ಷಾ ಮತ್ತು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿನಿಗೆ ಢಿಕ್ಕಿ ಹೊಡೆದಿದೆ.
ಉಜಿರೆಯಿಂದ ಗುರುವಾಯನಕೆರೆ ಕಡೆಗೆ ಟಿಪ್ಪರ್ ಹೋಗುತ್ತಿದ್ದ ಟಿಪ್ಪರ್ ಮುಂದೆ ಸಂಚಾರಿಸುತ್ತಿದ್ದ ಬಸ್ ಗೆ ಡಿಕ್ಕಿ ಹೊಡೆದಿದೆ. ನಂತರ ಇನ್ನೊಂದು ಬಸ್ಸಿನ ಮುಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಎರಡನೆ ಬಾರಿ ಡಿಕ್ಕಿ ಹೊಡೆದ ರಭಸಕ್ಕೆ ಟಿಪ್ಪರ್ ಏಕಾಏಕಿ ಶೋರೂಂ ಕಡೆಗೆ ತಿರುಗಿ ರಸ್ತೆಯಲ್ಲಿ ಹೋಗುತ್ತಿದ್ದ ವಿದ್ಯಾರ್ಥಿನಿಗೆ ಢಿಕ್ಕಿ ಹೊಡೆದು ಶೋರೂಂ ಎದುರು ನಿಲ್ಲಿಸಿದ್ದ ನಾಲ್ಕು ಕಾರು ಹಾಗೂ ಆಟೋ ರಿಕ್ಷಾಗೆ ಡಿಕ್ಕಿ ಹೊಡೆದಿದೆ.
ಬಳಂಜ ಗ್ರಾಮದ ಗುಂಡೇರಿ ನಿವಾಸಿ ವೀಕ್ಷಾ (17) ಗಂಭೀರವಾಗಿ ಗಾಯಗೊಂಡಿರುವ ವಿದ್ಯಾರ್ಥಿನಿ. ಆಕೆಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಾಯಾಳು ಯುವತಿ ಕಂಪ್ಯೂಟರ್ ತರಬೇತಿ ತರಗತಿಗೆ ಸೇರಿದ್ದು ತನ್ನ ಸ್ನೇಹಿತೆಯೊಂದಿಗೆ ತರಗತಿಗೆ ಹಾಜರಾಗಲು ನಡೆದುಕೊಂಡು ಹೋಗುತ್ತಿದ್ದಳು. ವೇಣೂರು ಸರಕಾರಿ ಕಾಲೇಜಿನಲ್ಲಿ ಪಿಯು ಓದಿದ್ದಳು. ಮತ್ತೋರ್ವ ಬಾಲಕಿ ಟಿಪ್ಪರ್‌ನ ಚಕ್ರದಡಿ ಸಿಲುಕಿ ಕೂದಲೆಳೆಯಂತರದಲ್ಲಿ ಪಾರಾಗಿದ್ದಾಳೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಇದೀಗ ಟಿಪ್ಪರ್ ಚಾಲಕ ಸುರೇಶ್ ವಿರುದ್ಧ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.