




ಕಾರವಾರ: ತಾಲೂಕಿನ ತಲಾಂದ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ವತಿಯಿಂದ ಬುಧವಾರ ರಾತ್ರಿ ಆಯೋಜಿಸಲಾಗಿದ್ದ ಗಣೇಶ ವಿಸರ್ಜನಾ ಮೆರವಣಿಗೆಯ ವೇಳೆ ಮಸೀದಿ ಹಾಗೂ ಮದರಸಾದ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ ಘಟನೆ ನಡೆದಿದೆ.
ತಲಾಂದದಿಂದ ಹೊರಟ ಮೆರವಣಿಗೆಯು ಗುಳ್ಳೆ ರೈಲ್ವೆ ಬ್ರಿಡ್ಜ್ ದಾಟಿ ರೈಲ್ವೆ ಸ್ಟೇಷನ್ ರಸ್ತೆಯ ಮೂಲಕ ಸಾಗುತ್ತಿದ್ದಾಗ, ಮಾರ್ಗಮಧ್ಯದಲ್ಲಿದ್ದ ಇಸ್ಮಾಯಿಲ್ ಸುನ್ನಿ ಜಾಮೀಯಾ ಮಸೀದಿ ಹಾಗೂ ತಾಜುಸುನ್ನಾ ಅರೇಬಿಕ್ ಮದರಸಾದ ಮೇಲೆ ಅಪರಿಚಿತರು ಕಲ್ಲುಗಳನ್ನು ತೂರಿದ್ದಾರೆ.
ಈ ದಾಳಿಯಿಂದಾಗಿ ಮಸೀದಿ ಹಾಗೂ ಮದರಸಾದ ಕಿಟಕಿ ಗಾಜುಗಳು ಪುಡಿಯಾಗಿದ್ದು, ಹಾನಿ ಸಂಭವಿಸಿದೆ. ಉದ್ದೇಶಪೂರ್ವಕವಾಗಿ ಶಾಂತಿ ಕದಡುವ ಹಾಗೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ನಿಟ್ಟಿನಲ್ಲಿ ಈ ಕೃತ್ಯ ಎಸಗಲಾಗಿದೆ ಎಂದು ಆರೋಪಿಸಲಾಗಿದೆ.
ಕಲ್ಲು ತೂರಾಟದ ಸುದ್ದಿ ಹರಡುತ್ತಿದ್ದಂತೆಯೇ ಮುಸ್ಲಿಂ ಸಮುದಾಯದ ನೂರಾರು ಜನರು ಭಟ್ಕಳ ನಗರ ಪೊಲೀಸ್ ಠಾಣೆಯ ಎದುರು ಜಮಾಯಿಸಿ, ತಪ್ಪಿತಸ್ಥರನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ತೀವ್ರ ಪ್ರತಿಭಟನೆ ನಡೆಸಿದರು. ಘಟನೆಗೆ ಸಂಬಂಧಿಸಿದಂತೆ ಬಂದರು ರಸ್ತೆ ನಿವಾಸಿ ಅಬ್ದುಲ್ ಅಲಿಂ ಹಾಗೂ ಶಾಹುಲ್ ಅಮೀನ್ ಗವಾಯಿ ಅವರು ನೀಡಿದ ದೂರಿನನ್ವಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯ ಗಂಭೀರತೆ ಅರಿತು ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಕೆಲ ಸದಸ್ಯರನ್ನು ಠಾಣೆಗೆ ಕರೆಸಿ ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದಾರೆ. ಪಟ್ಟಣದಲ್ಲಿ ಯಾವುದೇ ಅಹಿತಕರ ಘಟನೆಗಳು ಮರುಕಳಿಸದಂತೆ ವ್ಯಾಪಕ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಸ್ಥಳದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್., ಹೆಚ್ಚುವರಿ ಎಸ್ಪಿ ಜಿ. ಕೃಷ್ಣಮೂರ್ತಿ ಹಾಗೂ ಎಎಸ್ಪಿ ರಾನು ಗುಪ್ತ ಮೊಕ್ಕಾಂ ಹೂಡಿದ್ದು, ಸಿಪಿಐ ದಿವಾಕರ ಪಿ.ಎಂ. ಮತ್ತು ಪಿಎಸ್‌ಐ ನವೀನ ನಾಯ್ಕ ನೇತೃತ್ವದಲ್ಲಿ ತನಿಖೆ ಚುರುಕುಗೊಂಡಿದೆ ಎಂದು ತಿಳಿದು ಬಂದಿದೆ.








