

ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ವಿರುದ್ಧ ದಾಖಲಾದ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ಕೇಸ್ ರದ್ದು ಕೋರಿ ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿಯನ್ನು ಇಂದು ನ್ಯಾ.ಕೃಷ್ಣ ಎಸ್ ದೀಕ್ಷಿತ್ರವರ ಏಕಸದಸ್ಯ ಪೀಠದಲ್ಲಿ ವಿಚಾರಣೆ ಮಾಡಿದ್ದು, ತನಿಖೆಗೆ ಹಾಜರಾಗುವಂತೆ ಹೈಕೋರ್ಟ್ ಸೂಚನೆ ನೀಡಿದೆ. ಜೂ. 17ರಂದು ಹಾಜರಾಗುವುದಾಗಿ ಬಿ.ಎಸ್ ಯಡಿಯೂರಪ್ಪ ಪರ ವಕೀಲರು ಉತ್ತರಿಸಿದ್ದಾರೆ.
ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಯಡಿಯೂರಪ್ಪ ವಿರುದ್ಧ ಬೆಂಗಳೂರಿನ ಸದಾಶಿವನಗರ ಠಾಣೆಯಲ್ಲಿ ಪೋಕ್ಸೋ ಕೇಸ್ ದಾಖಲಾಗಿತ್ತು. ಈ ವಿಚಾರವಾಗಿ ಯಡಿಯೂರಪ್ಪಗೆ ಪೊಲೀಸರು ನೋಟಿಸ್ ನೀಡಿ ತನಿಖೆಗೆ ಹಾಜರಾಗುವಂತೆ ಸೂಚಿಸಿದ್ದರು. ಆದರೆ ಯಡಿಯೂರಪ್ಪ ವಿಚಾರಣೆಗೆ ಹಾಜರಾಗಿರಲಿಲ್ಲ. ನಂತರ ತಮ್ಮ ವಿರುದ್ಧದ ಕೇಸ್ ರದ್ದು ಮಾಡುವಂತೆ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಹಾಗೂ ಬಂಧನ ಭೀತಿಯಿಂದ ನಿರೀಕ್ಷಣಾ ಜಾಮೀನಿಗೆ ಕೂಡ ಅವರು ಅರ್ಜಿ ಸಲ್ಲಿಸಿದ್ದರು. ಇದೀಗ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದ್ದು, ಅದರಂತೆ ಜೂನ್ 17ರಂದು ಸಿಐಡಿ ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾಗಬೇಕು ಎಂದು ಯಡಿಯೂರಪ್ಪ ಅವರಿಗೆ ಕೋರ್ಟ್ ಸೂಚಿಸಿದೆ. ವಿಚಾರಣೆಯನ್ನು ಎರಡು ವಾರ ಮುಂದೂಡಲಾಗಿದೆ.