Sunday, July 26, 2026
spot_imgspot_img
spot_imgspot_img

ಹೆದ್ದಾರಿಯಲ್ಲಿ ಸಿಸಿಟಿವಿ ಅಳವಡಿಸಿ ಸೇನೆಯ ಚಲನವಲನ ಪಾಕಿಸ್ತಾನಕ್ಕೆ ರವಾನೆ – ಪಂಜಾಬ್‌ ವ್ಯಕ್ತಿ ಬಂಧನ

- Advertisement -
- Advertisement -

ಚಂಡೀಗಢ: ಪಂಜಾಬ್‌ನ ಪಠಾಣ್‌ಕೋಟ್ ಪೊಲೀಸರು ಶಂಕಿತ ಬೇಹುಗಾರಿಕೆ ಜಾಲವನ್ನು ಭೇದಿಸಿ, ಭಾರತೀಯ ಸೇನೆ ಹಾಗೂ ಅರೆಸೈನಿಕ ಪಡೆಗಳ ಚಲನವಲನಗಳ ಬಗ್ಗೆ ಸೂಕ್ಷ್ಮ ಮಾಹಿತಿಯನ್ನು ಪಾಕಿಸ್ತಾನದ ಹ್ಯಾಂಡ್ಲರ್‌ಗಳಿಗೆ ರವಾನಿಸುತ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ.

ಚಕ್ ಧಾರಿವಾಲ್ ಗ್ರಾಮದ ನಿವಾಸಿ ಬಲ್ಜಿತ್ ಸಿಂಗ್ ಅಲಿಯಾಸ್ ಬಿಟ್ಟು ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಪಠಾಣ್‌ಕೋಟ್-ಜಮ್ಮು ರಾಷ್ಟ್ರೀಯ ಹೆದ್ದಾರಿ 44ರ ಸಮೀಪದ ಸೇತುವೆ ಬಳಿ ಇರುವ ಅಂಗಡಿಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿ, ಸೇನೆ ಮತ್ತು ಅರೆಸೈನಿಕ ಪಡೆಗಳ ಸಂಚಾರದ ಮೇಲೆ ನಿಗಾವಹಿಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಹಿರಿಯ ಪೊಲೀಸ್ ಅಧಿಕಾರಿ ದಲ್ಜಿಂದರ್ ಸಿಂಗ್ ಧಿಲ್ಲೋನ್ ಮಾಹಿತಿ ನೀಡಿದ್ದು, ಸಂಗ್ರಹಿಸಿದ ಕಣ್ಗಾವಲು ಮಾಹಿತಿಯನ್ನು ಪಾಕಿಸ್ತಾನ ಹಾಗೂ ವಿದೇಶದಲ್ಲಿದ್ದ ಕಾರ್ಯಕರ್ತರಿಗೆ ಎಲೆಕ್ಟ್ರಾನಿಕ್ ಮಾಧ್ಯಮಗಳ ಮೂಲಕ ರವಾನಿಸಲಾಗುತ್ತಿತ್ತು ಎಂದಿದ್ದಾರೆ. ವಿಚಾರಣೆಯ ವೇಳೆ ಆರೋಪಿ, ಕಳೆದ ಜನವರಿಯಲ್ಲಿ ಸುಜನ್‌ಪುರ ಸಮೀಪದ ಹೆದ್ದಾರಿಯ ಅಂಗಡಿಯಲ್ಲಿ ಇಂಟರ್ನೆಟ್ ಆಧಾರಿತ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದಾಗಿ ಒಪ್ಪಿಕೊಂಡಿದ್ದಾನೆ. ದುಬೈನಲ್ಲಿ ನೆಲೆಸಿರುವ ಅಪರಿಚಿತ ವ್ಯಕ್ತಿಯಿಂದ ಸೂಚನೆಗಳು ಬರುತ್ತಿದ್ದವು ಎಂದು ತಿಳಿಸಿದ್ದಾನೆ. ಈ ಕಾರ್ಯಕ್ಕಾಗಿ ಆತ 40 ಸಾವಿರ ರೂ. ಹಣ ಪಡೆಯುತ್ತಿದ್ದುದಾಗಿ ಬಹಿರಂಗವಾಗಿದೆ.

ಆರೋಪಿಯಿಂದ ಸಿಸಿಟಿವಿ ಕ್ಯಾಮೆರಾ, ವೈಫೈ ರೂಟರ್ ಸೇರಿದಂತೆ ಹಲವು ಉಪಕರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪಠಾಣ್‌ಕೋಟ್-ಜಮ್ಮು ಹೆದ್ದಾರಿಯಲ್ಲಿ ಅನುಮಾನಾಸ್ಪದ ಚಟುವಟಿಕೆಗಳ ಕುರಿತು ಲಭಿಸಿದ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಪೊಲೀಸರು ಕ್ರಮ ಕೈಗೊಂಡಿದ್ದರು. ಈ ಪ್ರಕರಣದಲ್ಲಿ ಬಲ್ಜಿತ್ ಸಿಂಗ್ ಜೊತೆಗೆ ವಿಕ್ರಮ್‌ಜಿತ್ ಸಿಂಗ್ ಅಲಿಯಾಸ್ ವಿಕ್ಕಾ, ಬಲ್ವಿಂದರ್ ಸಿಂಗ್ ಅಲಿಯಾಸ್ ವಿಕ್ಕಿ ಹಾಗೂ ತರಣ್‌ಪ್ರೀತ್ ಸಿಂಗ್ ಅಲಿಯಾಸ್ ತನ್ನು ವಿರುದ್ಧವೂ ಪ್ರಕರಣ ದಾಖಲಾಗಿದೆ. ಆರೋಪಿಗಳು ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ಕುರಿತು ಹಿರಿಯ ಅಧಿಕಾರಿಗಳಿಗೆ ವಿವರವಾದ ವರದಿ ಕಳುಹಿಸಲಾಗಿದ್ದು, ಜಾಲದ ಗಡಿಯಾಚೆಗಿನ ಸಂಪರ್ಕಗಳು ಹಾಗೂ ಹಣಕಾಸಿನ ಮೂಲಗಳ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ. ಉಳಿದ ಆರೋಪಿಗಳನ್ನು ಬಂಧಿಸಲು ವಿಶೇಷ ಕಾರ್ಯಾಚರಣೆ ನಡೆಯುತ್ತಿದೆ.

- Advertisement -

Related news

error: Content is protected !!