ವರದಿ: ನ್ಯೂಸ್ ಡೆಸ್ಕ್, ವಿ ಟಿವಿ.
*ಅಮೆರಿಕದಲ್ಲೂ ಚೀನಾ ಆ್ಯಫ್ ಬ್ಯಾನ್..?
*ಚೀನಾ ಆ್ಯಪ್ ನಿಷೇಧದ ಬಗ್ಗೆ ಯುಎಸ್ ಸುಳಿವು
*ಆಸ್ಟ್ರೇಲಿಯಾದಲ್ಲೂ ಚೀನಾ ಆ್ಯಪ್ ನಿಷೇಧದ ಚಿಂತನೆ
ಲಡಾಕ್ ನ ಗಲ್ವಾನ್ ಕಣಿವೆಯಲ್ಲಿ ನಡೆದ ಗಡಿ ಸಂಘರ್ಷದ ನಂತರ ಚೀನಾದ 59 ಆ್ಯಪ್ ಗಳನ್ನು ಭಾರತ ಬ್ಯಾನ್ ಮಾಡಿದ ಬಳಿಕ, ಚೀನಾಗೆ ಮತ್ತೊಂದು ಬಿಗ್ ಶಾಕ್ ಎದುರಾಗಿದೆ. ಅಮೆರಿಕ ಕೂಡ ಚೀನಾದ ಆ್ಯಪ್ ಗಳನ್ನು ನಿಷೇಧ ಮಾಡಲು ಮುಂದಾಗಿದೆ ಎಂದು ತಿಳಿದುಬಂದಿದೆ.
ಟಿಕ್ ಟಾಕ್ ಸೇರಿದಂತೆ ಚೀನಾದ 59 ಆ್ಯಪ್ ಗಳನ್ನು ನಿಷೇಧ ಮಾಡುವ ಮೂಲಕ ಭಾರತ ಚೀನಾಗೆ ಬಿಸಿಮುಟ್ಟಿಸಿತ್ತು. ಆದರೆ ಈ ಆಘಾತದಿಂದ ಹೊರಬರುವ ಮುನ್ನವೇ ಚೀನಾಗೆ ಮತ್ತೊಂದು ಆತಂಕ ಸುದ್ದಿಯನ್ನು ನೀಡಲು ಅಮೆರಿಕ ಮುಂದಾಗಿದೆ ಎನ್ನಲಾಗಿದೆ. ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅಮೆರಿಕ ವಿದೇಶಾಂಗ ಇಲಾಖೆ ಕಾರ್ಯದರ್ಶಿ ಮೈಕ್ ಪೊಂಪಿಯೋ ಚೀನಾ ಆ್ಯಪ್ ನಿಷೇಧದ ಬಗ್ಗೆ ಸುಳಿವು ನೀಡಿದ್ದಾರೆ.ಚೀನಾದ ಆ್ಯಪ್ ಗಳನ್ನು ನಿಷೇಧಿಸುವ ಬಗ್ಗೆ ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಈ ಬಗ್ಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ನಾವು ಚೀನಾ ಆ್ಯಪ್ ಗಳ ನಿಷೇಧಿಸುವುದನ್ನು ಎದುರು ನೋಡುತ್ತಿದ್ದೇವೆ ಎಂದು ಮೈಕ್ ಪೊಂಪಿಯೋ ತಿಳಿಸಿದ್ದಾರೆ.
ಚೀನಾ ಆರ್ಥಿಕತೆಗೆ ಮತ್ತಷ್ಟು ಹೊಡೆತ:
ಇನ್ನು ಭಾರತದಲ್ಲಿ ಚೀನಾದ 59 ಆಪ್ ಗಳನ್ನು ನಿಷೇಧಿಸಿರುವುದರಿಂದ ಚೀನಾಗೆ ಭಾರೀ ನಷ್ಟ ಉಂಟಾಗಿದೆ. ಈ ನಡುವೆ ಅಮೆರಿಕದಲ್ಲೂ ಚೀನಾ ಆ್ಯಪ್ ಗಳನ್ನು ನಿಷೇಧ ಮಾಡಿದರೆ ಚೀನಾ ಆರ್ಥಿಕತೆಗೆ ಮತ್ತಷ್ಟು ಹೊಡೆತ ಬೀಳುವ ಸಾಧ್ಯತೆಯಿದೆ. ಮತ್ತೊಂದು ಕಡೆ ಆಸ್ಟ್ರೇಲಿಯಾದಲ್ಲಿಯೂ ಕೂಡ ಚೀನಾ ಆ್ಯಪ್ ಗಳ ನಿಷೇಧಕ್ಕೆ ಚಿಂತನೆ ನಡೆದಿದೆ ಎಂದು ತಿಳಿದುಬಂದಿದೆ.