Wednesday, April 23, 2025
spot_imgspot_img
spot_imgspot_img

ಕಾಶ್ಮೀರದಲ್ಲಿ ಕನ್ನಡಿಗರ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸಿಎಂ ಸೂಚನೆ

- Advertisement -
- Advertisement -

ಬೆಂಗಳೂರು: ಕಾಶ್ಮೀರದಲ್ಲಿ ಕನ್ನಡಿಗರ ರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮಂಗಳವಾರ ರಾತ್ರಿ ಅಧಿಕಾರಿಗಳ ಜೊತೆ ನಡೆಸಿದ ತುರ್ತು ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಈ ತುರ್ತು ಸಭೆ ಬೆನ್ನಲ್ಲೇ ಐಪಿಎಸ್ ಅಧಿಕಾರಿ ಚೇತನ್ ನೇತೃತ್ವದ ಅಧಿಕಾರಿಗಳ ತಂಡವನ್ನು ಕಾಶ್ಮೀರಕ್ಕೆ ಕಳಿಸಿಕೊಡಲಾಗಿದೆ. ದೆಹಲಿ ಕರ್ನಾಟಕ ಭವನದ ಆಯುಕ್ತರನ್ನೂ ಅರ್ಲಟ್ ಮಾಡಲಾಗಿದೆ. ಜೊತೆಗೆ ಇಡೀ ಕಾರ್ಯಾಚರಣೆಯ ಜವಾಬ್ದಾರಿಯನ್ನು ಸಿಎಂ ಕಾರ್ಮಿಕ ಸಚಿವ ಸಂತೋಷ್ ಲಾಡ್‌ಗೆ ವಹಿಸಿದ್ದಾರೆ.

ಇನ್ನು ಸಿಎಂ ಸೂಚನೆ ಬೆನ್ನಲ್ಲೇ ಸಚಿವ ಸಂತೋಷ್ ಲಾಡ್‌ಹುಬ್ಬಳ್ಳಿಯಿಂದ ದೆಹಲಿಗೆ ತೆರಳಿ ಅಲ್ಲಿಂದ ಕಾಶ್ಮೀರಕ್ಕೆ ವಿಶೇಷ ವಿಮಾನದಲ್ಲಿ ತೆರಳಿದ್ದು, ಕಾಶ್ಮೀರದ ಸ್ಥಳೀಯ ಆಡಳಿತ, ಭದ್ರತಾ ಪಡೆಗಳು ಮತ್ತು ಕೇಂದ್ರ ಸರ್ಕಾರದೊಂದಿಗೆ ಸಂಪರ್ಕದಲ್ಲಿ ಇರಲಿದ್ದಾರೆ. ಕನ್ನಡಿಗರಿಗೆ ಅಗತ್ಯವಿರುವ ವೈದ್ಯಕೀಯ ಸೌಲಭ್ಯ, ಸುರಕ್ಷಿತ ಸ್ಥಳಾಂತರ ಮತ್ತು ಇತರ ಸಹಾಯವನ್ನು ಒದಗಿಸುವ ಜವಾಬ್ದಾರಿ ಅವರದ್ದಾಗಿದೆ.

ಉಗ್ರರ ದಾಳಿಯನ್ನು ಖಂಡಿಸಿರುವ ಸಿಎಂ ಸಿದ್ದರಾಮಯ್ಯ, ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ ಕ್ಷಣಕ್ಷಣಕ್ಕೂ ಏರುತ್ತಿರುವುದು ಆತಂಕ ಹೆಚ್ಚಿಸಿದೆ. ದಾಳಿಗೆ ಬಲಿಯಾದ ಅಮಾಯಕ ಜೀವಗಳನ್ನು ನೆನಪಿಸಿಕೊಂಡರೆ ಎದೆ ನಲುಗುತ್ತದೆ ಎಂದು ಎಕ್ಸ್​​ನಲ್ಲಿ ಪೋಸ್ಟ್ ಮಾಡಿದ್ದಾರೆ.

ಮಡಿದ ಎಲ್ಲರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ. ಭಯೋತ್ಪಾದಕರ ಈ ಹೇಯ ಕೃತ್ಯದಲ್ಲಿ ಪ್ರವಾಸಕ್ಕೆಂದು ತೆರಳಿದ್ದ ಹಲವು ಕನ್ನಡಿಗರು ಕೂಡ ಸಾವನ್ನಪ್ಪಿರುವುದು ಅತ್ಯಂತ ದುಃಖದ ವಿಚಾರ. ಉಗ್ರ ಕೃತ್ಯದಿಂದಾಗಿ ದೂರದ ಕಾಶ್ಮೀರದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕನ್ನಡಿಗರ ರಕ್ಷಣೆಗಾಗಿ ರಾಜ್ಯದ ಅಧಿಕಾರಿಗಳ ತಂಡವನ್ನು ಸಂಜೆಯೇ ರವಾನಿಸಲಾಗಿದೆ. ಈ ಸಂದರ್ಭದಲ್ಲಿ ನಮ್ಮ ಸರ್ಕಾರದಿಂದ ಹೆಚ್ಚಿನ ನೆರವಿನ ಅಗತ್ಯ ಇದೆ ಎನ್ನುವುದನ್ನು ಅರಿತು ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಅವರಿಗೆ ಕಾಶ್ಮೀರಕ್ಕೆ ತೆರಳಿ ಇಡೀ ಕಾರ್ಯಾಚರಣೆಯ ಮೇಲ್ವಿಚಾರಣೆ ವಹಿಸುವಂತೆ ಸೂಚನೆ ನೀಡಿದ್ದೇನೆ. ಸಂತ್ರಸ್ತ ಕನ್ನಡಿಗರನ್ನು ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರುವ ಕಾರ್ಯವನ್ನು ನಮ್ಮ ಸರ್ಕಾರ ಮಾಡಲಿದೆ ಎಂದು ಅವರು ತಿಳಿಸಿದ್ದಾರೆ.

- Advertisement -

Related news

error: Content is protected !!