Wednesday, November 6, 2024
spot_imgspot_img
spot_imgspot_img

ಕೋವಿಡ್ ನಿರ್ವಹಣೆ ಕುರಿತಂತೆ ತಜ್ಞರೊಂದಿಗೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ಮಹತ್ವದ ಸಭೆ.! ಶೀಘ್ರದಲ್ಲೇ ನೂತನ ಮಾರ್ಗಸೂಚಿ ಬಿಡುಗಡೆ – ವೈದ್ಯಕೀಯ ಶಿಕ್ಷಣ ಸಚಿವ.!

- Advertisement -
- Advertisement -

ಬೆಂಗಳೂರು -: ರಾಜ್ಯದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರು ಬುಧವಾರ ಬೆಂಗಳೂರಿನಲ್ಲಿ ಮಹತ್ವದ ಸಭೆ ನಡೆಸಿದ್ದಾರೆ. ವಿವಿಧ ರಂಗಗಳ ತಜ್ಞ ವೈದ್ಯರುಗಳು, ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್, ಸಚಿವರಾದ ಬಸವರಾಜ್ ಬೊಮ್ಮಾಯಿ ಹಾಗೂ ಶ್ರೀರಾಮುಲು ಸೇರಿದಂತೆ ಅನೇಕರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಕೋವಿಡ್ ಚಿಕಿತ್ಸೆಗೆ ಹಾಗೂ ನಿರ್ವಹಣೆಗೆ ಅಳವಡಿಸಬೇಕಾದ ಮಾರ್ಗಸೂಚಿಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗಿದ್ದು, ವಿವಿಧ ತಜ್ಞರುಗಳು ಹಲವು ಉಪಯುಕ್ತ ಸಲಹೆಗಳನ್ನು ಸರ್ಕಾರಕ್ಕೆ ನೀಡಿದ್ದಾರೆ.ಈ ಸಂದರ್ಭದಲ್ಲಿ ಮಾತನಾಡಿದ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್, ತಜ್ಞರುಗಳ ಸಲಹೆಯನ್ನು ಸ್ವೀಕರಿಸಲಾಗಿದ್ದು, ಶೀಘ್ರದಲ್ಲೇ ಮಾನ್ಯ ಮುಖ್ಯಮಂತ್ರಿಗಳು ಉನ್ನತ ಮಟ್ಟದ ಮತ್ತೊಂದು ಸಭೆ ಕರೆದಿದ್ದಾರೆ. ಮುಂದಿನ ಮಾರ್ಗಸೂಚಿಗಳ ಕುರಿತಂತೆ ಸಧ್ಯದಲ್ಲೇ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ. ಬಳ್ಳಾರಿಯಲ್ಲಿ ಕೋವಿಡ್ ನಿಂದ ಮೃತಪಟ್ಟವರ ಶವಸಂಸ್ಕಾರ ಕುರಿತ ವಿವಾದಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು, ಘಟನೆ ಸಂಭವಿಸಿದ ದಿನದಂದೇ ಜಿಲ್ಲಾಡಳಿತದೊಂದಿಗೆ ಮಾತನಾಡಿದ್ದು ಅಲ್ಲಿನ ಜಿಲ್ಲಾಧಿಕಾರಿಯವರು ಈ ಘಟನೆಗಾಗಿ ಬೇಷರತ್ ಕ್ಷಮೆಯಾಚಿಸಿದ್ದಾರೆ. ಈ ಘಟನೆಗೆ ಕಾರಣರಾದ 6 ಮಂದಿಯನ್ನು ಕೆಲಸದಿಂದ ಅಮಾನತುಗೊಳಿಸಲಾಗಿದೆ, ಇನ್ನು ಮುಂದೆ ಇಂತಹ ಪ್ರಕರಣಗಳು ಮರುಕಳಿಸದಂತೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಸಭೆಯಲ್ಲಿ ವಿವಿಧ ತಜ್ಞರುಗಳು ತಮ್ಮ ಅಭಿಪ್ರಾಯ ಹಂಚಿಕೊಂಡರು. ರೋಗ ಲಕ್ಷಣ ಇಲ್ಲದ ಅಥವಾ ಅತ್ಯಂತ ಕಡಿಮೆ ಜ್ವರದ ಲಕ್ಷಣಗಳಿದ್ದರೆ, ಅವರನ್ನು ಮನೆಯಲ್ಲಿಯೇ ಪ್ರತ್ಯೇಕವಾಗಿರಿಸಿ (ಹೋಮ್ ಐಸೋಲೇಷನ್), ಅವರ ಆರೋಗ್ಯದ ಮೇಲೆ ನಿಗಾ ಇಡುವುದು ಸೂಕ್ತ. ಇದರಿಂದ ಆಸ್ಪತ್ರೆಗಳ ಮೇಲೆ ಒತ್ತಡ ತಡೆಯಬಹುದಾಗಿದೆ ಎಂದು ಬಹುತೇಕ ತಜ್ಞರು ಅಭಿಪ್ರಾಯಪಟ್ಟರು. ತೀವ್ರ ಸೋಂಕಿನ ಲಕ್ಷಣಗಳು ಹೊಂದಿರುವವರು ಹಾಗೂ ಇತರ ಆರೋಗ್ಯ ಸಮಸ್ಯೆಗಳಿರುವವರು ಸೋಂಕಿತರಾದಲ್ಲಿ, ಅವರಿಗೆ ಉತ್ತಮ ಚಿಕಿತ್ಸೆ ನೀಡಲು ಆದ್ಯತೆ ನೀಡಬೇಕು ಎಂದು ತಜ್ಞರು ಸಲಹೆ ಮಾಡಿದರು. ಅಲ್ಲದೆ ಟೆಲಿ ಮೆಡಿಸಿನ್ ಮೂಲಕ ಹೆಚ್ಚಿನ ರೋಗಿಗಳಿಗೆ ಚಿಕಿತ್ಸೆ ನೀಡಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆರೋಗ್ಯ ಕ್ಷೇತ್ರದಲ್ಲಿ ಸಿಬ್ಬಂದಿ ಹಾಗೂ ಪರಿಕರಗಳ ಅವಶ್ಯಕತೆಯನ್ನೂ ಕೂಡ ವ್ಯಕ್ತಪಡಿಸಿದರು.

ಟೆಲಿ ಐಸಿಯು ಹಾಗೂ ಚಿಕಿತ್ಸೆಯ ನಿಗದಿತ ಮಾನದಂಡಗಳ ಕುರಿತು ಹೆಚ್ಚಿನ ತರಬೇತಿ ಅಗತ್ಯ. ಆಸ್ಪತ್ರೆಗಳಿಗೆ ಆಮ್ಲಜನಕ ಪೂರೈಕೆ ಸರಪಣಿ ಹಾಗೂ ಹೊಸ ಔಷಧಿಗಳ ಪೂರೈಕೆ ಸರಪಣಿ ಅಬಾಧಿತವಾಗಿರಬೇಕು.. ರಾಜ್ಯದಲ್ಲಿ ಕೋವಿಡ್ ಕುರಿತು ಭೀತಿಯ ವಾತಾವರಣ ಸೃಷ್ಟಿಯಾಗಿದ್ದು, ಜನರಲ್ಲಿ ವಿಶ್ವಾಸ ಮೂಡಿಸುವ ಕೆಲಸವಾಗಬೇಕಿದೆ. ಇದಕ್ಕಾಗಿ ಮಾಧ್ಯಮಗಳು ಸರಿಯಾದ ರೀತಿಯಲ್ಲಿ ಸುದ್ದಿ ಬಿತ್ತರಿಸಬೇಕು ಎಂದು ಅವರುಗಳು ಮನವಿ ಮಾಡಿದರು.

ತಜ್ಞರುಗಳ ಸಲಹೆಗಳನ್ನು ಸರ್ಕಾರ ಉನ್ನತಮಟ್ಟದಲ್ಲಿ ವಿವರವಾಗಿ ಚರ್ಚಿಸಿ ಕ್ರಮಕೈಗೊಳ್ಳುವುದೆಂದು ಸಚಿವ ಸುಧಾಕರ್ ತಿಳಿಸಿದರು. ಸಭೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ದಕ್ಷಿಣ ಭಾರತದ ಪ್ರತಿನಿಧಿ ಶ್ರೀ ಆಶಿಶ್ ಸತ್ಪತಿ, ಕಿ ಕಿಮ್ಸ್‌ನ ಡಾ.ಲೋಕೇಶ್, ಮಣಿಪಾಲ ಆಸ್ಪತ್ರೆಯ ಮುಖ್ಯಸ್ಥ ಡಾ.ಸುಧಾಕರನ್ ಬಲ್ಲಾಳ್, ಡಾ.ಅಂಜನಪ್ಪ, ಡಾ.ಶರಣ್ ಪಾಟೀಲ್, ಡಾ.ಪ್ರಭುದೇವ್, ಡಾ.ಪ್ರದೀಪ್ ರಂಗಪ್ಪ, ಡಾ.ಪ್ರಕಾಶ್, ಡಾ.ಕುಮಾರ್, ಡಾ.ಗಿರಿಧರ್ ಬಾಬು, ಡಾ.ಷರೀಫ್, ಡಾ.ರಂಗನಾಥ, ಡಾ.ಸತೀಶ್, ಡಾ.ಭುಜಂಗ ಶೆಟ್ಟಿ ಸೇರಿದಂತೆ ಅನೇಕ ತಜ್ಞರು ಭಾಗವಹಿಸಿದ್ದರು.

- Advertisement -

Related news

error: Content is protected !!