ಬೆಂಗಳೂರು: ಡಿ.ಜೆ.ಹಳ್ಳಿ ಹಾಗೂ ಕೆ.ಜಿ. ಹಳ್ಳಿ ಸತ್ಯಾಂಶ ತಿಳಿಯಲು ಕಾಂಗ್ರೆಸ್ ನಿಂದ ಸಮಿತಿ ರಚನೆ ಮಾಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ನಿನ್ನೆಯ ಡಿಜಿ ಹಳ್ಳಿ ಘಟನೆಯನ್ನು ಕಾಂಗ್ರೆಸ್ ಖಂಡಿಸುತ್ತದೆ. ಕಾನೂನು ವಿರೋಧಿ ಕೃತ್ಯಕ್ಕೆ ನಮ್ಮ ಖಂಡನೆ ಇದೆ. ಯಾವುದೇ ಧರ್ಮ, ದೇವರ ವಿರುದ್ಧ ಅವಹೇಳನಕಾರಿ ಪೋಸ್ಟ್ ಗಳಿಗೆ ಖಂಡನೆ ಇದೆ. ನವೀನ್ ಕಟ್ಟಾ ಬಿಜೆಪಿ ಅಭಿಮಾನಿ. ಆತ ಬಿಜೆಪಿಗೆ ಮತ ಹಾಕಿದ್ದ ಬಗ್ಗೆಯೂ ಪೋಸ್ಟ್ ಮಾಡಿದ್ದಾನೆ. ನವೀನ್ ಪ್ರಚೋದನಕಾರಿ ಹೇಳಿಕೆ, ಪೋಸ್ಟ್ ಮಾಡುತ್ತಿದ್ದ. ನವೀನ್ಗೂ ಶಾಸಕ ಅಖಂಡ ಶ್ರೀನಿವಾಸಮೂರ್ತಿಗೂ ರಾಜಕೀಯ ಸಂಬಂಧ ಇಲ್ಲ. ಆದರೆ ನವೀನ್ಗೆ ಬಿಜೆಪಿ ಜೊತೆ ನಿಕಟ ಸಂಪರ್ಕ ಇತ್ತು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಇಂದು ಡಿ.ಕೆ. ಶಿವಕುಮಾರ್ ಇಂದು ಪಕ್ಷದ ನಾಯಕರ ಜತೆ ಸಭೆ ನಡೆಸಿದರು. ಬಳಿಕ ಮಾದ್ಯಮಗಳ ಜತೆ ಮಾತನಾಡಿದ ಅವರು, ಪೊಲೀಸರು ದೂರು ಬಂದಾಗಲೇ ಕ್ರಮ ತೆಗೆದುಕೊಳ್ಳಬೇಕಿತ್ತು. ಘಟನೆಗೆ ಪೊಲೀಸರೇ ವಿಳಂಬವೇ ಕಾರಣ. ಘಟನೆ ತಡೆಯಲು ಪೊಲೀಸರು ವಿಫಲರಾಗಿದ್ದಾರೆ ದೂರಿದ್ರು.
ಘಟನೆ ಹಿಂದೆ ಸಂಚು ಇದೆ:
ಪೊಲೀಸ್ ಠಾಣೆಯನ್ನೇ ರಕ್ಷಿಸಿಕೊಳ್ಳಲು ಪೊಲೀಸರಿಗೆ ಆಗಲಿಲ್ಲ. ನಮ್ಮ ಶಾಸಕರಿಗೂ ರಕ್ಷಣೆ ಕೊಡಲಿಲ್ಲ. ಘಟನೆ ಹಿಂದೆ ಸಂಚು ಇದೆ. ಘಟನೆ ಬಗ್ಗೆ ಪರಿಶೀಲನೆಗೆ ನಮ್ಮ 6 ಜನ ನಾಯಕರ ತಂಡ ಹೋಗುತ್ತಿದೆ. ಜೊತೆಗೆ ನಾನು ಕೂಡ ಘಟನೆ ನಡೆದ ಸ್ಥಳಕ್ಕೆ ಹೋಗುತ್ತೇನೆ ಎಂದು ತಿಳಿಸಿದರು.
ಸರ್ಕಾರದ ನಿರ್ಧಾರಗಳ ಬಗ್ಗೆ ಮಧ್ಯಪ್ರವೇಶಿಸಲ್ಲ:
ಘಟನೆಗೆ ಎಸ್ಡಿಪಿಐ ಮತ್ತು ಪಿಎಫ್ಐ ಸಂಘಟನೆ ನಿಷೇಧ ವಿಚಾರವಾಗಿ ಮಾತನಾಡಿದ ಡಿಕೆಶಿ, ಸರ್ಕಾರದ ನಿರ್ಧಾರಗಳ ಬಗ್ಗೆ ನಾವು ಮಧ್ಯ ಪ್ರವೇಶ ಮಾಡಲ್ಲ. ಘಟನೆಗ ಪ್ರಚೋದನೆ ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು . ಕುಮ್ಮಕ್ಕು ನೀಡಿದ ಸಂಘಟನೆ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.