ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್ 19 ಪಾಸಿಟಿವ್ ಪ್ರಕರಣಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮೇಯರ್ ಪ್ರೇಮಾನಂದ ಶೆಟ್ಟಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಪ್ರಸ್ತುತವಿರುವ ಕೋವಿಡ್ ಪರೀಕ್ಷೆಯನ್ನು ವ್ಯಾಪಕವಾಗಿ ಹೆಚ್ಚಿಸುವ ಮೂಲಕ ಸೋಂಕಿನ ಪ್ರಮಾಣವನ್ನು ಕಡಿಮೆಗೊಳಿಸುವುದು ಅನಿವಾರ್ಯವಾಗಿದೆ ಎಂದು ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಶೆದ್ಯಾಧಿಕಾರಿಗಳು, ನೋಡಲ್ ಅಧಿಕಾರಿಗಳ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಸೂಚನೆ ನೀಡಲಾಯಿತು.

ಪಾಲಿಕೆ ವ್ಯಾಪ್ತಿಯಲ್ಲಿ ಸದ್ಯ 1,226 ಸಕ್ರಿಯ ಪ್ರಕರಣಗಳಿದ್ದು, ಈ ಪೈಕಿ 50 ಕ್ಕೂ ಹೆಚ್ಚು ಪ್ರಕರಣಗಳಿರುವ 2 ವಾರ್ಡ್ಗಳಿವೆ. ನಗರ ವ್ಯಾಪ್ತಿಯಲ್ಲಿ ಸೋಂಕಿತರ ಪ್ರಮಾಣ ಶೇ 17 ರಷ್ಟಾಗಿದೆ. ಈ ಪ್ರಕರಣಗಳನ್ನು ಗಣನೀಯವಾಗಿ ತಗ್ಗಿಸಬೇಕು. ಹೆಚ್ಚಿನ ಪ್ರಮಾಣದಲ್ಲಿ ಪ್ರಾಥಮಿಕ ಸಂಪರ್ಕಿತರನ್ನು ಪರೀಕ್ಷೆಗೆ ಒಳಪಡಿಸಬೇಕು. ವಿಶೇಷವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಸಿಬ್ಬಂದಿ ಕರ್ತವ್ಯ ನಿರ್ವಹಿಸುವ ಸ್ಥಳಗಳಲ್ಲಿ ಕೋವಿಡ್ ಪ್ರಕರಣ ವರದಿಯಾದಲ್ಲಿ ಆ ಸ್ಥಳಗಳನ್ನು ಕೇಂದ್ರಿಕರಿಸಿ ಗರಿಷ್ಠ ಪ್ರಮಾಣದಲ್ಲಿ ಪ್ರಾಥಮಿಕ ಸಂಪರ್ಕಿತರನ್ನು ಪತ್ತೆ ಹಚ್ಚುವ ಬಗ್ಗೆ ಆದ್ಯತೆ ನೀಡಬೇಕು ಎಂದು ಆಯುಕ್ತ ಅಕ್ಷಯ್ ಶ್ರೀಧರ್ ಸೂಚನೆ ನೀಡಿದರು.

ಸಂಚಾರಿ ಗಂಟಲು ದ್ರವ ಪರೀಕ್ಷೆ ವ್ಯವಸ್ಥೆಯಡಿ ಪಾಲಿಕೆಯಿಂದ ಪ್ರತ್ಯೇಕವಾಗಿ ಸಹಾಯವಾಣಿ ಕೇಂದ್ರವನ್ನು ತೆರೆಯುವುದು ಅಗತ್ಯವಾಗಿದ್ದು, ಪ್ರತ್ಯೇಕವಾದ ದೂರವಾಣಿ ಸಂಖ್ಯೆಯನ್ನು ನಿಗದಿಪಡಿಸಿಕೊಂಡು ‘ಕೋವಿಡ್ ಪರೀಕ್ಷೆಗಾಗಿ ಸಂಪರ್ಕಿಸಿ’ ಎಂಬ ಕಾರ್ಯಾಚರಣೆಯನ್ನು 2 ದಿನಗಳೊಳಗಾಗಿ ಪ್ರಾರಂಭಿಸುವAತೆ ಮೇಯರ್ ಪ್ರೇಮಾನಂದ ಶೆಟ್ಟಿ ಸೂಚಿಸಿದರು.

ಪಾಲಿಕೆ ವ್ಯಾಪ್ತಿಯಲ್ಲಿ ಸಂಚಾರಿ ಗಂಟಲು ದ್ರವ ಪರೀಕ್ಷೆ ವ್ಯವಸ್ಥೆಯನ್ನು ಪ್ರಾರಂಭಿಸಲು ಈಗಾಗಲೇ 6 ತಂಡಗಳನ್ನು ರಚಿಸಲಾಗಿದ್ದು, ಈ ತಂಡದಲ್ಲಿರುವ ಸಿಬ್ಬಂದಿಗಳಿಗೆ ತರಬೇತಿ ನೀಡಲಾಗುತ್ತಿದೆ ಎಂದು ಜಿಲ್ಲಾ ಕೋವಿಡ್ ನೋಡಲ್ ಅಧಿಕಾರಿ ಡಾ.ಅಶೋಕ್ ತಿಳಿಸಿದರು. ಲಸಿಕೆ ಬಗ್ಗೆ ಮಾಹಿತಿ ನೀಡಿದ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸುಜಯ್ ಭಂಡಾರಿ, ಜಿಲ್ಲಾಡಳಿತ ನಿರ್ದೇಶನದಂತೆ ಆನ್‌ಲೈನ್ ನೋಂದಣಿದಾರರಿಗೆ ಹಾಗೂ ಆದ್ಯತಾ ವಲಯಕ್ಕೆ ವ್ಯವಸ್ಥಿತವಾಗಿ ಲಸಿಕೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಬುಧವಾರ ಮಾರ್ಗಸೂಚಿ ಉಲ್ಲಂಘಿಸಿದ 121 ಪ್ರಕರಣ ಪತ್ತೆಯಾಗಿದ್ದು, 61,150 ದಂಡ ವಿಧಿಸಲಾಗಿದೆ. 7 ಅಂಗಡಿಗಳ ಉದ್ಯಮ ಪರವಾನಗಿಯನ್ನು ತಾತ್ಕಾಲಿಕ ರದ್ದುಪಡಿಸಲಾಗಿದೆ.
