ಮಂಗಳೂರು: ಇಡೀ ದೇಶ ಕೊರೋನಾ ಎಂಬ ವೈರಸ್ ನಿಂದ ಆತಂಕಕ್ಕೊಳಗಾಗಿದ್ದು, ಸಾಮಾಜಿಕವಾಗಿ ಆರ್ಥಿಕವಾಗಿ ಇಂದೆಂದೂ ಕಂಡರಿಯದ ಸಮಸ್ಯೆಯಿಂದ ತೊಳಲಾಡುತ್ತಿದೆ. ಈ ಸಂದರ್ಭದಲ್ಲಿ ಜನ ಸಂಕಷ್ಟಗಳನ್ನು ನಿವಾರಿಸಲು ಮತ್ತು ಕೊರೋನಾವನ್ನು ಒದ್ದೋಡಿಸಲು ಡಾ. ಗಿರಿಧರ ಕಜೆ ಅವರ ಆಯುರ್ವೇದಿಕ್ ಮದ್ದನ್ನು ದ.ಕ. ಜಿಲ್ಲೆಯ ಜನರಿಗೆ ಪ್ರಾಯೋಗಿಕವಾಗಿ ನೀಡಬೇಕೆಂದು ಜಿಲ್ಲಾಡಳಿತಕ್ಕೆ ರೈತ ಸಂಘ ಮನವಿ ಮಾಡಿದೆ.ಮೋದಿ ನೇತೃತ್ವದ ಕೇಂದ್ರ ಸರ್ಕಾರ ಆತ್ಮನಿರ್ಭರ್ ಸ್ವದೇಶಿ ಅಂದೋಲನಕ್ಕೆ ಒತ್ತು ಕೊಡುತ್ತಿದೆ. ಈ ಸಂದರ್ಭದಲ್ಲಿ ನಮ್ಮದೇ ಸನಾತನ ಪರಂಪರೆಯ ಗಿಡ ಮೂಲಿಕೆಗಳನ್ನು ಆಧರಿಸಿ ಆಯುರ್ವೇದ ಔಷಧಿ ಚಿಕಿತ್ಸೆಗೆ ಒತ್ತು ಕೊಡಬೇಕು ಮತ್ತು ಈ ಕಾರ್ಯವನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಬೇಕು ಎಂದು ರೈತ ಸಂಘ, ಹಸಿರು ಸೇನೆ ಆಗ್ರಹಿಸಿದೆ.


ಪ್ರಪಂಚಕ್ಕೆ ಮಹಾಮಾರಿಯಾಗಿ ಪರಿಣಮಿಸಿದ ಕೊರೋನಾ ಎಂಬ ವೈರಸನ್ನು ರಾಜ್ಯ ಸರ್ಕಾರ ಆರೋಗ್ಯ ಇಲಾಖೆ ನಡೆಸುತ್ತಿದೆ. ಕೊರೋನಾ ವೈರಸ್ ವಿರುದ್ಧ ಆಂಗ್ಲ ಪದ್ಧತಿಯ ಔಷಧಿ ಕಂಪೆನಿಂಗಳ ಸಂಶೋಧನೆಯನ್ನು ನಂಬಿ ಕೂರುವ ಬದಲು ರಾಜ್ಯದವರೇ ಆದ ಡಾ. ಗಿರಿಧರ ಕಜೆ ಎಂಬವರ ಪ್ರಯತ್ನಕ್ಕೆ ಏಕೆ ಪ್ರೋತ್ಸಾಹ ನೀಡಬಾರದು ಎಂದು ರೈತ ಸಂಘ ಪ್ರಶ್ನಿಸಿದೆ.ಡಾ. ಕಜೆಯವರು ಗಿಡಮೂಲಿಕೆಗಳ ಆಧರಿಸಿ ಆಯುರ್ವೇದ ಮದ್ದನ್ನು ಬೆಂಗಳೂರು ವಿಕ್ಟೋರಿಯ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿತರಿಗೂ, ಸೋಂಕಿತರಲ್ಲದವರಿಗೂ ಗುಣಮುಖರಾದ ವರದಿಗಳು, ಹೇಳಿಕೆಗಳು ಮತ್ತು ವೀಡಿಯೋಗಳು ಬರುತ್ತಿದೆ.

ಹೀಗಿರುವಾಗ ಕೊರೋನಾ ಸೋಂಕಿತರು ಎಂದರೆ ಆಸ್ಪೃಶ್ಯರು ಎಂಬಂತೆ ಬಿಂಬಿಸುವ ವ್ಯವಸ್ಥೆ ನಮ್ಮ ಜಿಲ್ಲೆಯಲ್ಲಿ ಮತ್ತು ರಾಜ್ಯದಲ್ಲಿ ನಡೆಯುತ್ತಿದೆ. ಕೊರೋನಾ ವೈರಸ್ ಮತ್ತು ಅದರ ಚಿಕಿತ್ಸೆ ಬಗ್ಗೆ ಇನ್ನಿಲ್ಲದ ಭಯ ಹುಟ್ಟಿಸಿ ಆಸ್ಪತ್ರೆಗಳು ಲಕ್ಷಾಂತರ ಹಣವನ್ನು ಬಡ ರೋಗಿಗಳಿಂದ ಕೀಳುತ್ತಿದೆ. ಕೊರೋನಾದಿಂದ ಶೇ. 99ರಷ್ಟು ರೋಗಿಗಳು ಗುಣಮುಖರಾಗುತ್ತಿದ್ದರೂ ಇದನ್ನು ಮಾರಣಾಂತಿಕ ಎಂದು ಬಿಂಬಿಸಿ ಬಡಪಾಯಿಗಳನ್ನು ದೋಚಲಾಗುತ್ತಿದೆ.ಅಲೋಪತಿ ಮದ್ದಿನಿಂದ ಆಸ್ಪತ್ರೆಗಳಲ್ಲಿನ ಜನರು ಕುಟುಂಬ ಸಂಬಂಧಗಳಿಂದ ಬೇರ್ಪಡಿಸಿ ನರಕ ಯಾತನೆ ಅನುಭವಿಸುತ್ತಿದ್ದಾರೆ. ದ.ಕ. ಜಿಲ್ಲೆ, ರಾಜ್ಯ ಮತ್ತು ದೇಶದ ಲಾಕ್ ಡೌನ್ ನಡೆದರೆ ಜನರು ಉದ್ಯೋಗಳಿಲ್ಲದೆ ಬೀದಿಗೆ ಬೀಳುವ ಸ್ಥಿತಿ ಬರುತ್ತದೆ.

ಈ ಸಂದರ್ಭದಲ್ಲಿ ದ.ಕ. ಜಿಲ್ಲಾಡಳಿತ ಡಾ. ಕಜೆಯವರ ಮದ್ದನ್ನು ಈ ಸಮದಯದಲ್ಲಿ ಪ್ರಾಯೋಗಿಕವಾಗಿ ಮತ್ತು ಅನುಭವಕ್ಕೆ ಬಿಡುಗಡೆಗೊಳಿಸಿ ಸೋಂಕಿತರಿಂದ ಗುಣಮುಖರಾಗಲು ಪ್ರಯತ್ನಿಸಬೇಕು.ಕೇವಲ ರೂ. 60ರಿಂದ 180 ಗಳಷ್ಟಿರುವ ಡಾ. ಗಿರಿಧರ ಕಜೆಯವರ ಮದ್ದನ್ನು ಜಿಲ್ಲೆಯ ಪ್ರತಿ ಮನೆಗಳಿಗೂ ಮುಟ್ಟಿಸುವ ಕೆಲಸ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಜಿಲ್ಲಾ ಸಮಿತಿ ಒತ್ತಾಯಿಸಿದೆ.
