

ಮಂಗಳೂರು: ಮಂಗಳೂರು ನಗರ ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ನಗದು ಕಳವು ಪ್ರಕರಣವನ್ನು ಯಶಸ್ವಿಯಾಗಿ ಭೇಧಿಸಿದ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿ ಬಂಧಿಸಿದ್ದಾರೆ.

ದಿನಾಂಕ 07/02/2026 ರಂದು ಮಹಮ್ಮದ್ ನಿಜಾಮುದ್ದಿನ್ ಅವರು ಶ್ರೀಧರ ಆಳ್ವರರಿಗೆ ಸೇರಿದ ಅಡಿಕೆಯನ್ನು ಟಾಟಾ ಇಂಟ್ರಾ ವಾಹನದಲ್ಲಿ ಅಂಬಾರ ಸುಪಾರಿ ಅಂಗಡಿಗೆ ಮಾರಾಟ ಮಾಡಿ ಪಡೆದ ರೂ.1,28,740/- ನಗದು ಹಣವನ್ನು ವಾಹನದ ಡ್ಯಾಶ್ ಬೋರ್ಡ್ನಲ್ಲಿ ಇಟ್ಟುಕೊಂಡಿದ್ದರು. ನಂತರ ಬಂದರ್ ಜೆ.ಎಂ.ರೋಡ್ನ ಸದರ್ನ್ ಏಜೆನ್ಸಿಯಲ್ಲಿ ಎಸಿಪಿ ಶೀಟ್ ಖರೀದಿಸಿ ವಾಹನಕ್ಕೆ ಮರಳಿದಾಗ, ಡ್ಯಾಶ್ ಬೋರ್ಡ್ನಲ್ಲಿಟ್ಟಿದ್ದ ನಗದು ಕಳ್ಳತನವಾಗಿರುವುದು ಗೊತ್ತಾಯಿತು. ಈ ಕುರಿತು ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಪೊಲೀಸ್ ನಿರೀಕ್ಷಕ ಸಚಿನ್ ಕುಮಾರ್ ಅವರ ನೇತೃತ್ವದ ತಂಡ 08/02/2026 ರಂದು ನಗರದ ಮಣ್ಣಗುಡ್ಡ ಜಂಕ್ಷನ್ ಬಳಿ ಆರೋಪಿ ಝಾಕೀರ್ ಹುಸೈನ್ @ ಜಾಕಿ (38 ವರ್ಷ), ಕಸಬ ಬೆಂಗ್ರೆ ನಿವಾಸಿ, ಪ್ರಸ್ತುತ ಜಪ್ಪು ಮಾರ್ಕೆಟ್ ಸಮೀಪ ವಾಸಿಸುವವನನ್ನು ಬಂಧಿಸಿದೆ. ಆರೋಪಿತನಿಂದ ರೂ.70,000/- ನಗದು, ಕೃತ್ಯಕ್ಕೆ ಬಳಸಿದ ದ್ವಿಚಕ್ರವಾಹನ ಹಾಗೂ ಕಳ್ಳತನದ ಹಣದಿಂದ ಖರೀದಿಸಿದ ವಿವೋ ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ.ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಆರೋಪಿತನ ವಿರುದ್ಧ ಕುಂದಾಪುರ ಪೊಲೀಸ್ ಠಾಣೆ ಹಾಗೂ ಮಂಗಳೂರು ದಕ್ಷಿಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲೂ ಕಳವು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.ಈ ಪ್ರಕರಣದ ತನಿಖೆ ಹಾಗೂ ಆರೋಪಿ ಬಂಧನ ಕಾರ್ಯಾಚರಣೆಯಲ್ಲಿ ಮಂಗಳೂರು ಉತ್ತರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಸಚಿನ್ ಕುಮಾರ್, ಪೊಲೀಸ್ ಉಪ ನಿರೀಕ್ಷಕ ಶೀತಲ್ ಅಲಗೂರು, ಎಎಸ್ಐಗಳಾದ ಶಶಿಧರ ಹಾಗೂ ದಾಮೋದರ್ ಮತ್ತು ಉತ್ತರ ಪೊಲೀಸ್ ಠಾಣೆಯ ಇತರ ಸಿಬ್ಬಂದಿಗಳು ಪ್ರಮುಖ ಪಾತ್ರವಹಿಸಿದ್ದರು ಭಾಗವಹಿಸಿದ್ದರು.









