




ನವದೆಹಲಿ: ದೇಶದ ಜನಸಾಮಾನ್ಯರಿಗೆ ಮತ್ತೊಮ್ಮೆ ಬೆಲೆ ಏರಿಕೆಯ ಬಿಸಿ ತಟ್ಟಿದ್ದು, ಗೃಹಬಳಕೆಯ 14.2 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಪ್ರತಿ ಸಿಲಿಂಡರ್‌ಗೆ 29 ರೂ. ಏರಿಕೆಯಾಗಿದೆ.
ಜಾಗತಿಕ ಇಂಧನ ಮಾರುಕಟ್ಟೆಯಲ್ಲಿನ ಏರಿಳಿತ ಮತ್ತು ಪಶ್ಚಿಮ ಏಷ್ಯಾ ಸಂಘರ್ಷದ ಹಿನ್ನೆಲೆಯಲ್ಲಿ ತೈಲ ಕಂಪನಿಗಳು ಈ ನಿರ್ಧಾರ ಕೈಗೊಂಡಿದ್ದು ಇಂದಿನಿಂದಲೇ ಹೊಸ ದರಗಳು ಜಾರಿಗೆ ಬಂದಿವೆ.
ಕಳೆದ ಮೂರು ತಿಂಗಳಲ್ಲಿ ಎರಡನೇ ಬಾರಿಗೆ ಅಡುಗೆ ಅನಿಲ ದರ ಹೆಚ್ಚಳವಾಗಿದೆ. ಇದಕ್ಕೂ ಮುನ್ನ ಮಾರ್ಚ್ 7 ರಂದು ಸಿಲಿಂಡರ್ ಬೆಲೆಯಲ್ಲಿ 60 ರೂ. ಏರಿಕೆ ಮಾಡಲಾಗಿತ್ತು.ಇದರೊಂದಿಗೆ ದೆಹಲಿಯಲ್ಲಿ ಇದುವರೆಗೆ 913 ಇದ್ದ ಸಿಲಿಂಡರ್ ಬೆಲೆ ಈಗ 942 ರೂ. ಕ್ಕೆ ತಲುಪಿದೆ.
ಜೂನ್ 1 ರಂದೇ 19 ಕೆಜಿಯ ವಾಣಿಜ್ಯ ಸಿಲಿಂಡರ್ ಬೆಲೆಯನ್ನು 42 ರೂ. ರಷ್ಟು ಹೆಚ್ಚಿಸಲಾಗಿತ್ತು. ಜಾಗತಿಕ ಮಾರುಕಟ್ಟೆಯ ಏರಿಳಿತದಿಂದಾಗಿ ಇತ್ತೀಚಿನ ವಾರಗಳಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಸಿಎನ್‌ಜಿ ದರಗಳಲ್ಲೂ ಸಹ ಏರಿಕೆ ಕಂಡುಬಂದಿದೆ. ಮಧ್ಯಪ್ರಾಚ್ಯ ಭಾಗದಲ್ಲಿ ನಡೆಯುತ್ತಿರುವ ಯುದ್ಧ ಮತ್ತು ರಾಜತಾಂತ್ರಿಕ ಬಿಕ್ಕಟ್ಟುಗಳಿಂದಾಗಿ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ತಲ್ಲಣ ಉಂಟಾಗಿದೆ. ಇದು ಕಚ್ಚಾ ತೈಲ ಮತ್ತು ಅನಿಲದ ಆಮದು ವೆಚ್ಚವನ್ನು ಗಣನೀಯವಾಗಿ ಹೆಚ್ಚಿಸಿದೆ.
ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಲೆಗಳು ಏರಿದ್ದರೂ, ದೇಶೀಯ ಮಾರುಕಟ್ಟೆಯಲ್ಲಿ ತೈಲ ಕಂಪನಿಗಳು (IOCL, BPCL, HPCL) ಸಬ್ಸಿಡಿ ದರದ ಸಿಲಿಂಡರ್‌ಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದವು. ಇದರಿಂದ ಉಂಟಾಗುತ್ತಿದ್ದ ನಷ್ಟವನ್ನು ಭಾಗಶಃ ಸರಿದೂಗಿಸಲು ಬೆಲೆ ಏರಿಕೆ ಮಾಡಲಾಗಿದೆ ಎಂಬುದಾಗಿ ವರದಿಯಿಂದ ತಿಳಿದುಬಂದಿದೆ.








