ಉತ್ತರ ಪ್ರದೇಶ: ಬರ್ತ್ ಡೇ ಪಾರ್ಟಿಯಲ್ಲಿ ನೃತ್ಯ ಮಾಡಲು ನಿರಾಕರಿಸಿದ ಇಬ್ಬರು ನೃತ್ಯಗಾರ್ತಿಯರ ಮೇಲೆ 8 ಮಂದಿ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಉತ್ತರ ಪ್ರದೇಶದ ಖುಷಿನಗರದಲ್ಲಿ ನಡೆದಿದೆ. ಆರೋಪಿಗಳು ಆರ್ಕೆಸ್ಟ್ರಾ ನಡೆಯುತ್ತಿದ್ದ ಸಂದರ್ಭದಲ್ಲಿ ಇಬ್ಬರು ನೃತ್ಯಗಾರ್ತಿಯರನ್ನು ಹಣೆಗೆ ಬಂದೂಕಿಟ್ಟು ಅಪಹರಿಸಿ 10 ಕಿ.ಮೀ ದೂರಕ್ಕೆ ಕರೆದೊಯ್ದಿದ್ದಾರೆ.
ಆರೋಪಿಗಳನ್ನು ನಾಗೇಂದ್ರ ಯಾದವ್, ಅಸನ್ ಸಿಂಗ್, ಕ್ರಿಶ್ ತಿವಾರಿ, ಅರ್ಥಕ್ ಸಿಂಗ್, ಅಜಿತ್ ಸಿಂಗ್ ಮತ್ತು ವಿವೇಕ್ ಸೇಠ್, ನಿಸಾರ್ ಅನ್ಸಾರಿ, ಆದಿತ್ಯ ಸಾಹ್ನಿ ಎಂದು ಗುರುತಿಸಲಾಗಿದೆ.
ಆರೋಪಿಗಳಲ್ಲಿ ಒಬ್ಬನ ಮನೆಗೆ ಕರೆದೊಯ್ದಿದ್ದಾರೆ, ಬರ್ತ್ ಡೇ ಪಾರ್ಟಿಯಲ್ಲಿ ನೃತ್ಯ ಮಾಡುವಂತೆ ಆ ಇಬ್ಬರು ಯುವತಿಯರ ಬಳಿ ಕೇಳಿದ್ದಾರೆ. ಆದರೆ ಅವರು ನಿರಾಕರಿಸಿದ್ದಕ್ಕೆ ಕುಡಿದ ಮತ್ತಿನಲ್ಲಿ ಇಬ್ಬರ ಮೇಲೆ 8 ಮಂದಿ ಅತ್ಯಾಚಾರವೆಸಗಿದ್ದಾರೆ.
ಇದೀಗ ಅಪರಾಧಕ್ಕೆ ಬಳಸಿದ್ದ ಎರಡು ಎಸ್‌ಯುವಿ ಕಾರುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಎಲ್ಲಾ ಎಂಟು ಆರೋಪಿಗಳು 30 ವರ್ಷಕ್ಕಿಂತ ಕೆಳ ವಯಸ್ಸಿನವರಾಗಿದ್ದಾರೆ. ಆರೋಪಿಗಳನ್ನು ಖುಷಿನಗರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಯುವತಿಯರ ವೈದ್ಯಕೀಯ ಪರೀಕ್ಷೆ ಮುಗಿದಿದ್ದು ವರದಿಗಾಗಿ ಕಾಯಲಾಗುತ್ತಿದೆ.
ಸೆಪ್ಟೆಂಬರ್ 8ರ ರಾತ್ರಿ ಘಟನೆ ಕುರಿತು ಪೊಲೀಸರಿಗೆ ದೂರು ಬಂದಿತ್ತು. ಇತರ ಇಬ್ಬರು ಆರೋಪಿಗಳು – ನಿಸಾರ್ ಅನ್ಸಾರಿ ಮತ್ತು ಆದಿತ್ಯ ಸಾಹ್ನಿ, ಸೆಪ್ಟೆಂಬರ್ 10 ರಂದು ಪೊಲೀಸರು ನಡೆಸಿದ ಎನ್ಕೌಂಟರ್ನಲ್ಲಿ ಸಿಕ್ಕಿಬಿದ್ದಿದ್ದರು.
ಇಬ್ಬರ ಕಾಲಿಗೆ ಗುಂಡು ತಗುಲಿದ್ದು, ಪ್ರಥಮ ಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ವಿಚಾರಣೆ ವೇಳೆ ಆರೋಪಿಗಳು ತಮ್ಮ ಎಲ್ಲಾ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ತಡರಾತ್ರಿಯಾಗಿದ್ದರಿಂದ ಯುವತಿಯರು ನೃತ್ಯ ಮಾಡಲು ನಿರಾಕರಿಸಿದ್ದರು. ಬಂದೂಕು ತೋರಿಸಿ ಅಪಹರಿಸಿದ್ದರು.