Thursday, July 23, 2026
spot_imgspot_img
spot_imgspot_img

ಮಂಗಳೂರು: 29 ವರ್ಷಗಳಿಂದ ತಲೆಮರೆಸಿಕೊಂಡಿದ್ದ ‘ದಂಡುಪಾಳ್ಯ ಗ್ಯಾಂಗ್’ ಕುಖ್ಯಾತ ಆರೋಪಿ ಚಿಕ್ಕ ಹನುಮ ಆಂಧ್ರಪ್ರದೇಶದಲ್ಲಿ ಬಂಧನ

- Advertisement -
- Advertisement -

ಮಂಗಳೂರು: 1997ರಲ್ಲಿ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 29 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕುಖ್ಯಾತ ‘ದಂಡುಪಾಳ್ಯ ಗ್ಯಾಂಗ್’ ಸದಸ್ಯ ಚಿಕ್ಕ ಹನುಮ @ ಚಿಕ್ಕ ಹನುಮಂತಪ್ಪ @ ಕೆ. ಕೃಷ್ಣಪ್ಪ @ ಕೃಷ್ಣ (55)ನನ್ನು ಮಂಗಳೂರು–ಉರ್ವ ಠಾಣಾ ಪೊಲೀಸರು ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ಮದನಪಳ್ಳೆಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

.


ಉರ್ವ ಪೊಲೀಸ್ ಠಾಣೆಯ ಅಪರಾಧ ಸಂಖ್ಯೆ 113/1997, ಕಲಂ 460, 396, 400 ಐಪಿಸಿ ಅಡಿ ದಾಖಲಾಗಿದ್ದ ಪ್ರಕರಣದಲ್ಲಿ ಆರೋಪಿ (ಎ–6)ಯಾಗಿದ್ದ ಚಿಕ್ಕ ಹನುಮನು ವರ್ಷಗಳ ಕಾಲ ಹೆಸರು ಬದಲಿಸಿಕೊಂಡು ಕಾನೂನಿನ ಕೈಗೆ ಸಿಗದೆ ಆಂಧ್ರಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದ. ಈತನ ವಿರುದ್ಧ 2010ರಲ್ಲಿ ಮಂಗಳೂರು ಜೆಎಂಎಫ್‌ಸಿ 2ನೇ ನ್ಯಾಯಾಲಯದಿಂದ ಎಲ್‌ಪಿಸಿ ವಾರೆಂಟ್ ಜಾರಿಯಾಗಿತ್ತು.


ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ. ಆರೋಪಿಯು ದಂಡುಪಾಳ್ಯ ಗ್ರಾಮ, ಹೊಸಕೋಟೆ ತಾಲೂಕು, ಬೆಂಗಳೂರು ಜಿಲ್ಲೆ ಮೂಲ ನಿವಾಸಿಯಾಗಿದ್ದು, ಇತ್ತೀಚೆಗೆ ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ವಿಜಯನಗರ ಕಾಲೋನಿಯಲ್ಲಿ ವಾಸವಿದ್ದನು.


ಘಟನೆಯ ಹಿನ್ನೆಲೆ:
1997ರ ಅಕ್ಟೋಬರ್ 11ರಂದು ಮಧ್ಯರಾತ್ರಿ ಮಂಗಳೂರು ಉರ್ವಾ ಮಾರಿಗುಡಿ ಕ್ರಾಸ್ ಬಳಿಯ ಅನ್ವರ್ ಮಹಲ್ ಎಂಬ ಮನೆಗೆ ನುಗ್ಗಿದ ದಂಡುಪಾಳ್ಯ ಗ್ಯಾಂಗ್ ಸದಸ್ಯರು, ಮನೆಯಲ್ಲಿದ್ದ ಲೂವಿಸ್ ಡಿಮೆಲ್ಲೋ (80) ಹಾಗೂ ರಂಜಿತ್ ವೇಗಸ್ (19)ರನ್ನು ಕೊಲೆ ಮಾಡಿ ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿದ್ದರು. ಪ್ರಕರಣದ ವಿಚಾರಣೆ ಪೂರ್ಣಗೊಂಡ ಬಳಿಕ, ಇತರೆ ಐದು ಆರೋಪಿಗಳನ್ನು ನ್ಯಾಯಾಲಯ ದೋಷಿಗಳೆಂದು ತೀರ್ಪು ನೀಡಿತ್ತು.


ಆರೋಪಿ ಚಿಕ್ಕ ಹನುಮ ತನ್ನ ಗುರುತನ್ನು ಮರೆಮಾಚಿ ವಿಚಾರಣೆಗೆ ಹಾಜರಾಗದೆ ಪರಾರಿಯಾಗಿದ್ದ. ಈತನ ಮೇಲೆ ಕರ್ನಾಟಕ ರಾಜ್ಯದಲ್ಲಿ ಸುಮಾರು 13 ಕೊಲೆ ಹಾಗೂ ದರೋಡೆ ಪ್ರಕರಣಗಳು ದಾಖಲಾಗಿರುವುದು ತಿಳಿದುಬಂದಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.


ಬಂಧನ ಕಾರ್ಯಾಚರಣೆ:
ಈ ಪತ್ತೆ ಕಾರ್ಯಾಚರಣೆಯಲ್ಲಿ ಉರ್ವಾ ಪೊಲೀಸ್ ಠಾಣೆಯ ನಿರೀಕ್ಷಕ ಶ್ಯಾಮ್ ಸುಂದರ್ ಹೆಚ್.ಎಂ., ಪಿಎಸ್ಐ ಗುರಪ್ಪ ಕಾಂತಿ, ಪಿಎಸ್ಐ ಎಲ್. ಮಂಜುಳಾ, ಎಎಸ್ಐ ವಿನಯ ಕುಮಾರ್ ಹಾಗೂ ಸಿಬ್ಬಂದಿಗಳಾದ ಲಲಿತಲಕ್ಷ್ಮಿ, ಅನಿಲ್, ಪ್ರಮೋದ್, ಆನಂದ, ಹರೀಶ್ ಅವರು ಭಾಗವಹಿಸಿದರು.
ಬಂಧನ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಮಂಗಳೂರು ನಗರ ಪೊಲೀಸ್ ಆಯುಕ್ತರು, ತಂಡದ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಬಹುಮಾನ ನೀಡುವಂತೆ ರಾಜ್ಯ ಡಿಜಿ & ಐಜಿಪಿ ಅವರಿಗೆ ಶಿಫಾರಸು ಮಾಡಿದ್ದಾರೆ.

- Advertisement -

Related news

error: Content is protected !!