Thursday, September 17, 2026
spot_imgspot_img
spot_imgspot_img

ಧರ್ಮಸ್ಥಳ: ಹತ್ತು ದಿನಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದ ಯುವತಿಯ ಮೃತದೇಹ ಪತ್ತೆ!

- Advertisement -
- Advertisement -

ಧರ್ಮಸ್ಥಳ: ಹತ್ತು ದಿನಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದ ಬೆಳ್ತಂಗಡಿ ತಾಲೂಕಿನ ನೆರಿಯದ ಯುವತಿಯ ಮೃತದೇಹ ಸಮೀಪದ ಕೋಲೋಡಿ ಕಾಡಿನಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ನಿವಾಸಿ ಮಂಜುನಾಥ ಮತ್ತು ಸುಶೀಲಾ ಕೆ ದಂಪತಿ ಪುತ್ರಿ ತೇಜಸ್ವಿನಿ (23) ಮೃತ ದೇಹ ಪತ್ತೆಯಾದ ಯುವತಿ. ಕೋಲೋಡಿ ಕಾಡಿನ ಸಮೀಪದ ಸ್ಥಳೀಯರು ಬಿದಿರು ಕಡಿಯುವ ಉದ್ದೇಶದಿಂದ ಕಾಡಿಗೆ ತೆರಳಿದ್ದ ಸಂದರ್ಭ ಯುವತಿಯ ಮೃತದೇಹ ಕಂಡು ಬಂದಿದೆ.

ತೇಜಸ್ವಿನಿಯವರು ಕಳೆದ ನಾಲ್ಕು ವರ್ಷಗಳಿಂದ ಉಜಿರೆಯ ನಿವಾಸಿಯೊಬ್ಬರ ಮನೆಯಲ್ಲಿ ಮನೆಕೆಲಸ ಮಾಡಿಕೊಂಡು ಅಲ್ಲೇ ವಾಸ್ತವ್ಯ ಹೂಡಿ ಉಜಿರೆಯ ಕಂಪ್ಯೂಟರ್ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣ ಪಡೆಯುತ್ತಿದ್ದರು ಫೆ.22 ರಂದು ಸಂಜೆ ಕಂಪ್ಯೂಟರ್ ಕ್ಲಾಸ್ ಮುಗಿಸಿ ನೆರಿಯದಲ್ಲಿರುವ ತನ್ನ ತಾಯಿ ಮನೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ಮರಳಿ ಬಾರದೆ, ನಾಪತ್ತೆಯಾಗಿದ್ದರು.

ಆದರೆ ಅದೇ ದಿನ ಸಂಜೆ 4 ಗಂಟೆ ಸುಮಾರಿಗೆ ನೆರಿಯ ಗ್ರಾಮದ ಅಣಿಯೂರು ಎಂಬಲ್ಲಿ ಕೋಲೋಡಿ ಕಡೆಗೆ ತೇಜಸ್ವಿನಿಯವರು ನಡೆದುಕೊಂಡು ಹೋಗುತ್ತಿರುವುದನ್ನು ನೋಡಿದ ಆಕೆಯ ಅಕ್ಕ ಸುಮಂಗಳ ತಮ್ಮೊಂದಿಗೆ ಜೀಪಿನಲ್ಲಿ ತೇಜಸ್ವಿನಿಯನ್ನು ಕರೆದುಕೊಂಡು ಹೋಗಿದ್ದಾರೆ. ತೇಜಸ್ವಿನಿಯನ್ನು ಆಕೆಯ ಮನೆಯ ಹತ್ತಿರ ಇಳಿಸಿದ ಸುಮಂಗಳ ಬಳಿಕ ಪತಿಯೊಂದಿಗೆ ತಮ್ಮ ಮನೆಗೆ ಹಿಂದಿರುಗಿದ್ದರು.

ರಾತ್ರಿ 7 ಗಂಟೆಯಯಾದರೂ ತೇಜಸ್ವಿನಿಯವರು ತಾನು ಕೆಲಸ ಮಾಡುತ್ತಿದ್ದ ಉಜಿರೆಯ ಮನೆಗೆ ಮರಳಿ ಬಾರದೆ ಇದ್ದಾಗ ಮನೆಯೊಡತಿ ಯುವತಿಯ ಮನೆಯವರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ. ಯುವತಿಯ ಮೊಬೈಲ್ ಕೂಡ ಸ್ವೀಚ್ ಆಫ್ ಆಗಿದ್ದು, ಅತ್ತ ತಾಯಿ ಮನೆಗೂ ಹೋಗದೆ ಇತ್ತ, ಕೆಲಸದ ಮನೆಗೂ ಹೋಗದೆ ನಿಗೂಢವಾಗಿ ಕಣ್ಮರೆಯಾಗಿದ್ದರು.

ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಗೆ ಯುವತಿಯ ಪೋಷಕರು ದೂರು ನೀಡಿದ್ದು, ಧರ್ಮಸ್ಥಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಯುವತಿಯ ಸಾವಿನ ನಿಖರ ಕಾರಣ ಇನ್ನಷ್ಟೇ ತಿಳಿದು ಬರಬೇಕಿದೆ.

- Advertisement -

Related news

error: Content is protected !!