

ದಾವಣಗೆರೆ: ನ್ಯಾಮತಿ ಎಸ್‍ಬಿಐ ಬ್ಯಾಂಕ್ ದರೋಡೆ ಪ್ರಕರಣದಲ್ಲಿ ಆರು ತಿಂಗಳ ಬಳಿಕ ಚಿನ್ನಾಭರಣ ಸಹಿತ ಅರೋಪಿಗಳ ಬಂಧನವಾಗಿದೆ. ಆರೋಪಿಗಳ ವಿಚಾರಣೆ ವೇಳೆ ಸ್ಫೋಟಕ ವಿಚಾರ ಬಯಲಾಗಿದ್ದು, ಚಿನ್ನ ಮುಚ್ಚಿಟ್ಟಿದ್ದು, ದರೋಡೆಗೆ ಕಾರಣ, ಸಂಚು ಎಲ್ಲವನ್ನೂ ಆರೋಪಿಗಳು ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾರೆ.
ಪ್ರಕರಣದಲ್ಲಿ 6 ಜನ ಆರೋಪಿಗಳ ಬಂಧನವಾಗಿದೆ. ಕದ್ದಿದ್ದ 17 ಕೆಜಿ ಬಂಗಾರ ವಶಪಡಿಸಿಕೊಳ್ಳಲಾಗಿದೆ. ದರೋಡೆ ಪ್ರಕರಣದ ಮಾಸ್ಟರ್ ಮೈಂಡ್ ವಿಜಯ್ ಕುಮಾರ್ ನ್ಯಾಮತಿಯಲ್ಲಿ ಬೇಕರಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದ. ಬ್ಯಾಂಕ್‍ನಲ್ಲಿ ಲೋನ್ ಪಡೆಯಲು ಎರಡು ಬಾರಿ ಅರ್ಜಿ ಹಾಕಿದ್ದ, ಈ ಅರ್ಜಿ ತಿರಸ್ಕಾರವಾಗಿತ್ತು. ಇದರಿಂದ ರೋಸಿ ಹೋಗಿದ್ದ. ಇದೇ ಕಾರಣಕ್ಕೆ ಬ್ಯಾಂಕ್ ದರೋಡೆಗೆ ಹಿಂದಿ ವೆಬ್ ಸೀರಿಸ್ ನೋಡಿ ದರೋಡೆಗೆ ಸಂಚು ರೂಪಿಸಿದ್ದ.
ಆರೋಪಿಗಳು ಮೊಬೈಲ್, ವಾಹನ ಬಳಸದೇ, ಯಾವ ಸಾಕ್ಷಿಯನ್ನೂ ಬಿಡದೆ ದರೋಡೆ ಮಾಡಿದ್ದರು. ದರೋಡೆ ಮಾಡಿದ 17 ಕೆಜಿ ಚಿನ್ನವನ್ನು ತಮಿಳುನಾಡಿನ ಮಧುರೈನಲ್ಲಿರುವ ತೋಟದ ಮನೆಯ ಪಾಳು ಬಿದ್ದ ಬಾವಿಯಲ್ಲಿ ಲಾಕರ್‌ನಲ್ಲಿ ಇಟ್ಟಿದ್ದರು.
ದರೋಡೆಗೆ ಮೊದಲು, ದರೋಡೆಯ ನಂತರ ದರೋಡೆಕೋರರು ಗಡಿ ಚೌಡಮ್ಮನ ಅಷ್ಟಧಿಗ್ಬಂಧನ ಪೂಜೆ ಮಾಡಿದ್ದರು. ಅಲ್ಲದೇ ದರೋಡೆಯ ಮಾಹಿತಿಯನ್ನು ಕುಟುಂಭಸ್ಥರ ಜೊತೆಯೂ ಹಂಚಿಕೊಂಡಿರಲಿಲ್ಲ. ಪೊಲೀಸರು ಆರೋಪಿಗಳನ್ನು ಟೆಕ್ನಿಕಲ್ ಎವಿಡೆನ್ಸ್ ಮೂಲಕ ಬಂಧಿಸಿದ್ದರು.