


ಬೆಂಗಳೂರು: ನಿವೃತ್ತಿಯ ಅಂಚಿನಲ್ಲಿದ್ದ ಪೊಲೀಸ್ ಇನ್‌ಸ್ಪೆಕ್ಟರ್ ಒಬ್ಬರ ಮೃತದೇಹ ತುಮಕೂರಿನ ಹೋಟೆಲ್ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಇಂದು ಬೆಳಗ್ಗೆ ಕಂಡುಬಂದಿದೆ. ದಾವಣಗೆರೆ ಪೊಲೀಸ್ ಠಾಣೆಯ ಸಬ್‌ಇನ್ಸ್ ಪೆಕ್ಟರ್ ನಾಗರಾಜಪ್ಪ (58) ಮೃತಪಟ್ಟವರು. ತುಮಕೂರಿನ ದ್ವಾರಕಾ ಹೋಟೆಲ್ ಲಾಡ್ಜ್‌ನಲ್ಲಿ ಮೃತದೇಹ ಕೊಳೆತ ಸ್ಥಿತಿಯಲ್ಲಿ ಸಿಕ್ಕಿದೆ. 4 ದಿನಗಳ ಹಿಂದೆ ನೇಣಿಗೆ ಶರಣಾಗಿದ್ದು, ಮೃತದೇಹ ಕೊಳೆತು ಹುಳಗಳಾಗಿದ್ದವು ಎಂದು ತಿಳಿದು ಬಂದಿದೆ.
ದಾವಣಗೆರೆಯ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ನಾಗರಾಜಪ್ಪ ಜುಲೈ 1ರಂದು ತುಮಕೂರು ನಗರದದಲ್ಲಿರುವ ದ್ವಾರಕಾ ಲಾಡ್ಜ್ನ ನಾಲ್ಕನೇ ಮಹಡಿಯಲ್ಲಿರುವ ರೂಮ್ ಬಾಡಿಗೆ ಪಡೆದುಕೊಂಡಿದ್ದು, ಅಲ್ಲೇ ಫ್ಯಾನ್‌ಗೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ತುಮಕೂರು ನಗರ ಠಾಣೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.
ಇಂದು ಬೆಳಗ್ಗೆ ಲಾಡ್ಜ್‌ನಲ್ಲಿ ದುರ್ವಾಸನೆ ಬಂದಿದೆ. ಬಳಿಕ ಲಾಡ್ಜ್ ಸಿಬ್ಬಂದಿ ಹೋಗಿ ನೋಡಿದಾಗ ಇನ್ಸ್ಪೆಕ್ಟರ್ ಆತ್ಮಹತ್ಯೆಗೆ ಮಾಡಿಕೊಂಡಿರುವುವುದು ಬೆಳಕಿಗೆ ಬಂದಿದೆ. ದಾವಣಗೆರೆ ತಾಲೂಕಿನ ಜವಳಘಟ್ಟ ಗ್ರಾಮದ ನಿವಾಸಿಯಾಗಿದ್ದ ನಾಗರಾಜಪ್ಪ, ದಾವಣಗೆರೆಯ ಬಡಾವಣೆ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಆಗಿದ್ದರು.
ಅವರು ಬರೆದಿಟ್ಟಿದ್ದ ಡೆತ್ ನೋಟ್ ಲಾಡ್ಜ್‌ನ ರೂಮ್‌ನಲ್ಲಿ ಪತ್ತೆಯಾಗಿದೆ. 2 ಪುಟ ಇರುವ ಡೆತನೋಟ್‌ನಲ್ಲಿ, ನನ್ನ ಸಾವಿಗೆ ನಾನೇ ಕಾರಣ, ಕೌಟುಂಬಿಕ ಕಲಹಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದಿದ್ದಾರೆ. ಅಲ್ಲದೇ ಹೋಟೆಲ್ ಮಾಲೀಕರಿಗೂ ಡೆತ್ ನೋಟ್ನಲ್ಲಿ ಕ್ಷಮೆ ಕೇಳಿದ್ದಾರೆ. ನಾಗರಾಜ ಒಂದೂವರೆ ವರ್ಷದಲ್ಲೇ ಕರ್ತವ್ಯದಿಂದ ನಿವೃತ್ತಿಯಾಲಿದ್ದರು. ಆರೋಗ್ಯ ಸಮಸ್ಯೆ ಕಾಡುತ್ತಿತ್ತು. ಶುಗರ್, ಬಿಪಿ ಹಾಗೂ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು.
ಜುಲೈ 1ರಂದು ಮನೆಯಿಂದ ಹೋಗಿದ್ದರು. ಮನೆ ಬಿಟ್ಟು ಹೋದ ಬಳಿಕ ಮೊಬೈಲ್ ಆಫ್ ಮಾಡಿದ್ದರು. ಇದರಿಂದ ದಾವಣಗೆರೆ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಬಗ್ಗೆ ದೂರು ದಾಖಲಿಸಲಾಗಿತ್ತು. ಇಂದು ಬೆಳಗ್ಗೆ ನಮಗೆ ವಿಚಾರ ಗೊತ್ತಾಯಿತು ಎಂದು ನಾಗರಾಜ ಅವರ ಪತ್ನಿ ಲಲಿತಮ್ಮ ಮಾಧ್ಯಮದವರ ಬಳಿ ಹೇಳಿಕೊಂಡಿದ್ದಾರೆ.