ಕಾಸರಗೋಡು: ಕಿಯೂರು ಆಳಿವೆ ಬಾಗಿಲಿನಲ್ಲಿ ಹತ್ತು ದಿನಗಳ ಹಿಂದೆ ಸಮುದ್ರಪಾಲಾಗಿದ್ದ ವ್ಯಕ್ತಿಯೋರ್ವರ ಮೃತದೇಹ ತೃಶ್ಯೂರು ಸಮೀಪದ ಅಝಿಕ್ಕೋಡ್ ಸಮುದ್ರ ಕಿನಾರೆಯಲ್ಲಿ ಸೋಮವಾರ ಮಧ್ಯಾಹ್ನ ಪತ್ತೆಯಾಗಿದೆ.
ಚೆಮ್ನಾಡ್ ಕಲ್ಲುವಳಪ್ಪು ನಿವಾಸಿ ಮುಹಮ್ಮದ್ ರಿಯಾಜ್ (37) ಮೃತಪಟ್ಟವರು.
ಆಗಸ್ಟ್ 31ರಂದು ಮುಂಜಾನೆ 5:30 ರ ಸುಮಾರಿಗೆ ಘಟನೆ ನಡೆದಿತ್ತು. ಕಿಯೂರು ಆಳಿವೆ ಬಾಗಿಲಿನಲ್ಲಿ ಗಾಳ ಹಾಕಿ ಮೀನು ಹಿಡಿಯಲು ತೆರಳಿದ್ದ ರಿಯಾಜ್ ನಾಪತ್ತೆಯಾಗಿದ್ದರು. ಬೆಳಿಗ್ಗೆ 9 ಗಂಟೆಯಾದರೂ ಮನೆಗೆ ಬಾರದ ಹಿನ್ನಲೆಯಲ್ಲಿ ಮನೆಯವರು ಮೊಬೈಲ್ ಗೆ ಕರೆ ಮಾಡಿದ್ದು, ಅವರು ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ಈತನ್ಮಧ್ಯೆ ಕಿಯೂರು ಆಳಿವೆ ಬಾಗಿಲಿನಲ್ಲಿ ರಿಯಾಜ್ ನ ಸ್ಕೂಟರ್ ಹಾಗೂ ಗಾಳ ಹಾಕುವ ವಸ್ತುಗಳನ್ನು ಒಳಗೊಂಡ ಬ್ಯಾಗ್ ಪತ್ತೆಯಾಗಿತ್ತು.
ಬಳಿಕ ಮೇಲ್ಪರಂಬ ಪೊಲೀಸರಿಗೆ ನೀಡಿದ ಮಾಹಿತಿಯಂತೆ ಪೊಲೀಸರು, ಅಗ್ನಿ ಶಾಮಕ ದಳದ ಸಿಬ್ಬಂದಿಗಳು, ಕರಾವಳಿ ಪೊಲೀಸ್, ಮೀನುಗಾರಿಕಾ ಇಲಾಖೆ ಹಾಗೂ ಮೀನುಗಾರರರು ಶೋಧ ನಡೆಸಿದ್ದರು. ಪತ್ತೆಯಾಗದ ಹಿನ್ನಲೆಯಲ್ಲಿ ಮುಳುಗು ತಜ್ಞ ಈಶ್ವರ್ ಮಲ್ಪೆ ರವರನ್ನು ಕರೆಸಿ ಗಂಟೆಗಳ ಕಾಲ ಶೋಧ ನಡೆಸಿದರೂ ರಿಯಾಜ್ ನನ್ನು ಪತ್ತೆಹಚ್ಚಲಾಗಲಿಲ್ಲ. ಎರಡು ದಿನಗಳ ಕಾಲ ನೌಕಾ ಪಡೆ ಸಿಬಂದಿಗಳು ಹುಡುಕಾಟ ನಡೆಸಿದರೂ ವಿಫಲಗೊಂಡಿತ್ತು.
ಈ ನಡುವೆ ಸೋಮವಾರ ಮಧ್ಯಾಹ್ನ ತೃಶ್ಯೂರು ಅಝಿಕ್ಕೋಡ್ ಕಡಲ ಕಿನಾರೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ಪ್ಯಾಂಟ್ ಕಿಸೆಯಿಂದ ಲಭಿಸಿದ ಮೊಬೈಲ್ ನಲ್ಲಿದ್ದ ಸಿಮ್ ಹಾಗೂ ಧರಿಸಿದ್ದ ಜಾಕೆಟ್ ನಿಂದ ರಿಯಾಜ್ ನ ಮೃತದೇಹ ಎಂದು ಗುರುತು ಪತ್ತೆ ಹಚ್ಚಲು ಸಾಧ್ಯವಾಯಿತು. ಮೃತದೇಹವನ್ನು ಕೊಡಂಗಲ್ಲೂರು ಸರಕಾರಿ ಆಸ್ಪತ್ರೆ ಶವಾಗಾರದಲ್ಲಿರಿಸಲಾಗಿದ್ದು, ಸಂಬಂಧಿಕರು ಮ್ರತೆದಾಹದ ಗುರುತು ಪತ್ತೆಹಚ್ಚಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಚೆಮ್ನಾಡ್ ಗೆ ತರಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.