


ಉಡುಪಿ: ಪತ್ನಿ ಮೃತಪಟ್ಟ ಮರುದಿನವೇ ಅವರ ಪತಿ ಕೂಡ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಕಾರ್ಕಳ ತಾಲೂಕಿನ ಉದ್ಯಾವರದಲ್ಲಿ ಸಂಭವಿಸಿದೆ.
ಉದ್ಯಾವರ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಹಾಗೂ ಉದ್ಯಾವರ ಗ್ರಾಮ ಪಂಚಾಯತ್ ಸದಸ್ಯರಾಗಿದ್ದ ಲಾರೆನ್ಸ್ ಡೆಸಾ ಹಾಗೂ ಅವರ ಪತ್ನಿ ಶಿಕ್ಷಕಿ ಜುಲಿಯಾನಾ ಡೆಸಾ ಮೃತಪಟ್ಟ ದಂಪತಿ.ಲಾರೆನ್ಸ್ ಡೆಸಾ ಅವರ ಪತ್ನಿ ಶಿಕ್ಷಕಿ ಜುಲಿಯಾನಾ ಡೆಸಾ ಗುರುವಾರ ಅನಾರೋಗ್ಯದಿಂದ ಮನೆಯಲ್ಲೇ ಮೃತಪಟ್ಟಿದ್ದರು. ಅದರ ಬೆನ್ನಲ್ಲೆ ಪತಿ ಲಾರೆನ್ಸ್ ಡೆಸಾ ಕೂಡ ಪತ್ನಿಯ ಸಾವಿನಿಂದ ಆಘಾತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದು ಶುಕ್ರವಾರ ಸಂಜೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.ಲಾರೆನ್ಸ್ ಡೆಸಾ ಅವರು ಉದ್ಯಾವರ ಗ್ರಾಮ ಪಂಚಾಯತ್ ನ ಹಿರಿಯ ಸದಸ್ಯರಾಗಿದ್ದು ಸ್ಥಳೀಯ ಚರ್ಚಿನ ಪಾಲನಾ ಮಂಡಳಿಯ ಉಪಾಧ್ಯಕ್ಷರಾಗಿ ಕೂಡ ಸೇವೆ ಸಲ್ಲಿಸುತ್ತಿದ್ದರು.
ಸ್ಥಳೀಯ ಲಯನ್ಸ್ ಹಾಗೂ ಇನ್ನಿತರ ಸಂಘಟನೆಗಳಲ್ಲಿ ಸಕ್ರೀಯ ಪದಾಧಿಕಾರಿಯಾಗಿ, ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದರು.ಪತ್ನಿ ಶಿಕ್ಷಿಕಿ ಜುಲಿಯಾನಾ ಡೆಸಾ ಉದ್ಯಾವರದ ಸಂತ ಫ್ರಾನ್ಸಿಸ್ ಕ್ಸೇವಿಯರ್ ಹಿರಿಯ ಪ್ರಾಥಮಿಕ ಶಾಲೆ ಸಹಿತಾ ವಿವಿಧ ಶಾಲೆಗಳಲ್ಲಿ ಸಹ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಇವರು, ಕಳೆದ ಹಲವು ವರ್ಷಗಳಿಂದ ಕಾರ್ಕಳ ಬೈಲೂರಿನ ಮೈನ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಅತ್ಯಂತ ಸರಳ ಸ್ವಭಾವದವರಾಗಿದ್ದ ಇವರು, ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕಿಯಾಗಿದ್ದರು. ಲಯನ್ಸ್ ಕ್ಲಬ್ ಉದ್ಯಾವರ ಇಲ್ಲಿ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಇವರು, ಕ್ರೀಡೆಯಲ್ಲಿಯೂ ಹಲವು ಪದಕಗಳನ್ನು ಜಯಿಸಿದ್ದರು.ಲಾರೆನ್ಸ್ ಡೆಸಾ ಅವರು ಐದು ಬಾರಿ ಗ್ರಾಮ ಪಂಚಾಯತ್ ಸದಸ್ಯ, 2-3 ಬಾರಿ ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷ, ಇಂಗ್ಲಿಷ್ ಮಾಧ್ಯಮ ಶಾಲೆ, ಧರ್ಮಗುರುಗಳ ಮನೆ, ಚರ್ಚ್, ಸಭಾಭವನ ಎಲ್ಲವೂ ಇವರದೇ ಆಳ್ವಿಕೆಯಲ್ಲಿರುವಾಗಲೇ ಆಗಿವೆ. ಯಾವುದೇ ಜವಾಬ್ದಾರಿಯನ್ನು ಕೊಟ್ಟರು ಅತ್ಯಂತ ಯಶಸ್ವಿ ಮಟ್ಟದಲ್ಲಿ ನಿಭಾಯಿಸಬಲ್ಲ ಸಾರಥಿಯಾಗಿದ್ದರು. ಫ್ರೆಂಡ್ಸ್ ಸರ್ಕಲ್, ಲಯನ್ಸ್ ಕ್ಲಬ್, ಕಥೊಲಿಕ್ ಸಭಾ ಜೊತೆಗೆ ಬೇರೆ ಬೇರೆ ಸಂಘ ಸಂಸ್ಥೆಗಳಲ್ಲಿ ಅಧ್ಯಕ್ಷ ಸ್ಥಾನ ಹಾಗೂ ಇತರ ಬೇರೆ ಬೇರೆ ಹುದ್ದೆಗಳನ್ನು ಸ್ವೀಕರಿಸಿ ಸಂಘಟನೆಯನ್ನು ಬಲಿಷ್ಠ ಮಾಡಿದ್ದರು.ಇವರು ಮಾಡುವ ಕೃಷಿ ಎಲ್ಲರಿಗೂ ಪ್ರೇರಣೆಯಾಗಿತ್ತು. ಮಳೆ ಇರಲಿ, ಬಿಸಿಲಿರಲಿ ಲಾರೆನ್ಸ್ ಡೆಸಾ ಅವರು ಜನಪರ ಕಾರ್ಯಕ್ರಮಗಳಲ್ಲಿ ತೊಡಗಿಕೊಳ್ಳುತ್ತಿದ್ದರು. ಉದ್ಯಾವರ ಪಂಚಾಯತ್ ನ ಬಹಳಷ್ಟು ಸದಸ್ಯರು ತಮ್ಮದೇ ವಾರ್ಡ್ನಲ್ಲಿ ನಿಂತು ಗೆದ್ದರೆ, ಇವರು ಮಾತ್ರ ಉದ್ಯಾವರದ ಯಾವುದೇ ವಾರ್ಡ್ನಲ್ಲಿ ನಿಂತರೂ ಗೆದ್ದುಬರುವ ಚಾಣಾಕ್ಷತೆ ಹಾಗೂ ಜನಪ್ರೀಯತೆ ಇವರಿಗೆ ಇತ್ತು.ಇದೀಗ ಪತ್ನಿಯ ಸಾವಿನ ಆಘಾತದಲ್ಲಿ ಲಾರೆನ್ಸ್ ಡೆಸಾ ಅವರು ಮೃತಪಟ್ಟಿದ್ದಾರೆ. ಮೃತರು ಪುತ್ರ, ಹಾಗೂ ಪುತ್ರಿಯನ್ನು ಹಾಗೂ ಅಪಾರು ಬಂಧು ವರ್ಗವನ್ನು ಅಗಲಿದ್ದಾರೆ.