



ಕಾಸರಗೋಡು : ಹತ್ತು ದಿನಗಳ ಬಾಣಂತಿಯೋರ್ವಳ ಮೃತದೇಹ ಮನೆ ಸಮೀಪದ ಬಾವಿಯಲ್ಲಿ ಪತ್ತೆಯಾದ ಘಟನೆ ಕೂಡು ಪಾರೆಕಟ್ಟೆ ಬಳಿ ನಡೆದಿದೆ.
ಕಂಬಾರು ಬೆದ್ರಡ್ಕದ ಪೋಸ್ಟ್ ಮಾಸ್ತರ್ ವೃತ್ತಿಯಲ್ಲಿದ್ದ ಸುರೇಖ (29) ಮೃತಪಟ್ಟ ಯುವತಿ ಎಂದು ಗುರುತಿಸಲಾಗಿದೆ. ಜೋಡುಕಲ್ಲು ಸಮೀಪದ ಅರಿಯಾಳ ನಿವಾಸಿ ಜಯ್ ಕುಮಾರ್ ಆಚಾರ್ಯ ಎಂಬವರ ಪತ್ನಿಯಾದ ಸುರೇಖ ಕಳೆದ ಹತ್ತು ದಿನಗಳ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿ ಬಾಣಂತಿಯಾಗಿ ತವರು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ರಾತ್ರಿ ಊಟ ಮಾಡಿ ಮಲಗಿದ್ದ ಸುರೇಖ ಅವರ ಬಳಿ ಅವರ ತಾಯಿ, ಅತ್ತೆ ಹಾಗೂ ಸಮೀಪದ ಕೊಠಡಿಯಲ್ಲಿ ಪತಿ ಮಲಗಿದ್ದರು. ಕೆಲ ಸಮಯದ ಬಳಿಕ ಮಗು ಅಳುತ್ತಿದ್ದು ಮನೆಯವರು ಎದ್ದು ನೋಡಿದಾಗ ಸುರೇಖ ಮಲಗಿದ್ದಲ್ಲಿ ಇರಲಿಲ್ಲ ಬಳಿಕ ಹುಡುಕಾಡಿದಾಗ ಮನೆ ಸಮೀಪದ ಬಾವಿ ಬಳಿ ಟಾರ್ಚ್ ಲೈಟ್ ಪತ್ತೆಯಾಗಿದ್ದು, ಈ ಹಿನ್ನಲೆಯಲ್ಲಿ ಮನೆಯವರು ಸಂಶಯಗೊಂಡು ಬಾವಿಯಲ್ಲಿ ಶೋಧ ಕಾರ್ಯ ನಡೆಸಿದಾಗ ಮೃತದೇಹ ಪತ್ತೆಯಾಗಿತ್ತು.
ಬಾಣಂತಿ ಸಮಯದಲ್ಲಿ ಸುರೇಖರಿಗೆ ತೀವ್ರ ಹೊಟ್ಟೆ ನೋವು ಕಾಡುತ್ತಿರುವುದಾಗಿ ತಿಳಿಸುತ್ತಿದ್ದು ಈ ನಡುವೆ ಮಾನಸಿಕ ಖಿನ್ನತೆಗೊಳಗಾಗಿ ಆತ್ಮಹತ್ಯೆಗೆ ಶರಣಾಗಿರಬೇಕೆಂದು ಪೊಲೀಸರು ಪ್ರಾಥಮಿಕ ವರದಿಯಲ್ಲಿ ತಿಳಿಸಿದ್ದಾರೆ. ಪೋಸ್ಟು ಮಾಸ್ತರ್ ಹುದ್ದೆ ನಿರ್ವಹಿಸುತ್ತಿದ್ದ ಸುರೇಖ ಬಹಳ ಚುರುಕಿನೊಂದಿಗೆ ಎಲ್ಲರೊಡನೆ ಆತ್ಮೀಯತೆಯಿಂದ ವರ್ತಿಸುತ್ತಿದ್ದು, ಕಳೆದೆರಡು ವರ್ಷಗಳ ಹಿಂದೆ ವಿವಾಹಿತರಾದ ಇವರು ಗಂಡನ ಮನೆಯಲ್ಲೂ ಪರಿಸರದಲ್ಲೂ ಆತ್ಮೀಯತೆ ಬೆಳೆಸಿಕೊಂಡಿದ್ದರು ಎಂದು ತಿಳಿದು ಬಂದಿದೆ. ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಲಾಗಿದೆ.