ಬೆಳಗಾವಿ: ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ದೆಹಲಿಯ ಖಾಸಗಿ ಹೋಟೆಲ್ವೊಂದರಲ್ಲಿ ದಿಢೀರ್ ಭೇಟಿಯಾಗಿ ಒಂದು ಗಂಟೆ ಚರ್ಚೆ ನಡೆಸಿದ್ದಾರೆ.
ಮೂಲಗಳ ಪ್ರಕಾರ ಬಿಜೆಪಿ ಹೈಕಮಾಂಡ್ ಸೂಚನೆ ಮೇರೆಗೆ ದೆಹಲಿಯ ಖಾಸಗಿ ಹೋಟೆಲ್ವೊಂದರಲ್ಲಿ ರಮೇಶ್ ಜಾರಕಿಹೊಳಿ ಫಡ್ನವಿಸ್ರನ್ನು ಭೇಟಿಯಾಗಿದ್ದಾರೆ ಎನ್ನಲಾಗುತ್ತಿದೆ. ಕೋವಿಡ್ ನಿಯಂತ್ರಣದಲ್ಲಿ ವೈಫಲ್ಯ ಹಾಗೂ ಚಿತ್ರ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಮಹಾರಾಷ್ಟ್ರ ಸರ್ಕಾರ ಜನರ ನಂಬಿಕೆ ಕ್ಷೀಣಿಸತೊಡಗಿದೆ ಎನ್ನಲಾಗಿದೆ.
ಬೆಳಗಾವಿಯಲ್ಲಿ ಪ್ರಭಾವಿಯಾಗಿರುವ ಜಾರಕಿಹೊಳಿ ಬ್ರದರ್ಸ್ ಮಹಾರಾಷ್ಟ್ರ ಭಾಗದಲ್ಲೂ ಪ್ರಭಾವ ಹೊಂದಿದ್ದಾರೆ. ಮೇಲಾಗಿ ಗಡಿಭಾಗದ ಶಾಸಕರು ಪಕ್ಷಭೇದ ಇಲ್ಲದೆ ಬೆಳಗಾವಿಯ ಪ್ರಭಾವಿಗಳ ಜೊತೆ ಹತ್ತಿರದ ನಂಟು ಹೊಂದಿದ್ದಾರೆ. ಇಂಥ ವ್ಯಕ್ತಿ ಈಗ ಮಹಾರಾಷ್ಟ್ರದಲ್ಲಿ ಕಳೆದ ಬಾರಿ ಸಿಎಂ ಆಗಿದ್ದ ದೇವೇಂದ್ರ ಫಡ್ನವಿಸ್ ಅವರನ್ನು ಭೇಟಿಯಾಗಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಸೂಚನೆ ಮೇರೆಗೆ ರಮೇಶ್ ಜಾರಕಿಹೊಳಿ ದೆಹಲಿಯಲ್ಲಿ ಈ ಭೇಟಿ ಮಾಡಿದ್ದಾರೆ ಎನ್ನಲಾಗ್ತಿದೆ. ಒಂದು ಗಂಟೆಗೂ ಹೆಚ್ಚು ಕಾಲ ಇವರಿಬ್ಬರು ಮಾತುಕತೆ ನಡೆಸಿದ್ದು ಈಗ ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ. ಮಹಾರಾಷ್ಟ್ರದಲ್ಲಿ ಆಪರೇಷನ್ ಕಮಲ ಆರಂಭಿಸುವ ಬಗ್ಗೆ ಇಬ್ಬರ ಭೇಟಿ ವೇಳೆ ಚರ್ಚೆ ನಡೆದಿದೆ ಎಂದು ಸಚಿವರ ಮೂಲಗಳು ಖಚಿತಪಡಿಸಿವೆ.ಮಹಾರಾಷ್ಟ್ರ ರಾಜಕಾರಣದಲ್ಲಿ ಸಚಿವ ರಮೇಶ್ ಜಾರಕಿಹೊಳಿ ಹಿಡಿತ ಹೊಂದಿದ್ದು ಉಭಯ ನಾಯಕರ ಭೇಟಿ ಭಾರಿ ಚರ್ಚೆಗೆ ಕಾರಣವಾಗಿದೆ.