ಧರ್ಮಸ್ಥಳ: ಪ್ರಕರಣವೊಂದಕ್ಕೆ ಸಂಬಂಧಿಸಿ ದೂರು ನೀಡಲು ಬಂದ ಯುವತಿಯನ್ನು ಪರಿಚಯ ಮಾಡಿಕೊಂಡ ಪಿಎಸ್‌ಐ ಬಳಿಕ ಮದುವೆಯಾಗುವುದಾಗಿ ನಂಬಿಸಿ ನಂತರ ಧರ್ಮಸ್ಥಳಕ್ಕೆ ಕರೆತಂದು ಲಾಡ್ಜ್ ನಲ್ಲಿ ಅತ್ಯಾಚಾರ ಎಸಗಿದ್ದಾನೆ.

ಯುವತಿಯು ಬೆಂಗಳೂರಿನ ಚಾಮರಾಜಪೇಟೆ ಪೊಲೀಸ್ ಠಾಣೆಯ ಪಿಎಸ್‌ಐ ವಿಶ್ವನಾಥ್ ಬಿರಾದರ್ ವಿರುದ್ಧ ಧರ್ಮಸ್ಥಳ ಠಾಣೆಗೆ ದಿನಾಂಕ 11-11-2020 ರಂದು ಸಂತ್ರಸ್ತ ಯುವತಿ ದೂರು ನೀಡಿದ್ದು, ಅದರಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಪೊಲೀಸರು ಆರೋಪಿ ಪಿಎಸ್‌ಐ ವಿಶ್ವನಾಥ್ ಬಿರಾದರ್ ರನ್ನು ಬಂಧಿಸಿರಲಿಲ್ಲ. ನಂತರದ ದಿನಗಳಲ್ಲಿ ದಕ್ಷಿಣ ಕನ್ನಡ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಲಯದಿಂದ ಜಾಮೀನು ಪಡೆದುಕೊಂಡಿದ್ದ. ಆದರೆ ಛಲ ಬಿಡದ ಯುವತಿ ಪ್ರಕರಣದ ಆರೋಪಿ ಪಿಎಸ್‌ಐಯನ್ನು ಬಂಧಿಸದೆ ಧರ್ಮಸ್ಥಳ ಠಾಣೆಯ ಪಿಎಸ್‌ಐ ಹಾಗೂ ಬೆಳ್ತಂಗಡಿ ಸರ್ಕಲ್ ಇನ್ಸೆಕ್ಟರ್ ಸಂದೇಶ್.ಪಿ.ಜಿ ಮತ್ತು ಸಿಬ್ಬಂದಿಗಳು ಸಹಕರಿಸಿದ್ದ ವಿರುದ್ಧ ಕ್ರಮ ಕೈಗೊಳ್ಳಲು ಮತ್ತು ಜಾಮೀನು ರದ್ದು ಮಾಡಲು ಹೈಕೋರ್ಟ್ ಮೆಟ್ಟಿಲೇರಿದ್ದಳು.

ಹೈಕೋರ್ಟ್ ಜಾಮೀನು ರದ್ದು ಮಾಡಿ ಆರೋಪಿಯನ್ನು ತಕ್ಷಣವೇ ಬಂಧಿಸಲು ಆದೇಶ ಹೊರಡಿಸಿತ್ತು. ಅಲ್ಲದೇ ಧರ್ಮಸ್ಥಳ ಪಿಎಸ್‌ಐ ಪವನ್ ಕುಮಾರ್ , ಬೆಳ್ತಂಗಡಿ ಸರ್ಕಲ್ ಇನ್ಸೆಕ್ಟರ್ ಅಗಿದ್ದ ಸಂದೇಶ್ ಮತ್ತು ಕೆಲ ಸಿಬ್ಬಂದಿ ವಿರುದ್ಧ ಮೂರು ತಿಂಗಳಲ್ಲಿ ದಕ್ಷಿಣ ಕನ್ನಡ ಎಸ್ಪಿ ತನಿಖೆ ಮಾಡಿ ವರದಿ ನೀಡಲು ಆದೇಶ ಮಾಡಿತ್ತು.

ಸಂತ್ರಸ್ತ ಯುವತಿ ಪ್ರಕರಣವನ್ನು ಸಿಐಡಿ ಮುಖಾಂತರ ತನಿಖೆ ಮಾಡಲು ಹೈಕೋರ್ಟ್ ಗೆ ತನ್ನ ವಕೀಲರ ಮೂಲಕ ಅರ್ಜಿ ಸಲ್ಲಿಸಿದ್ದರು. ಇದೀಗ ಪ್ರಕರಣವನ್ನು ಸಿಐಡಿ ತನಿಖೆ ನಡೆಸಲು ಆದೇಶ ಮಾಡಿದ್ದು ಅದರಂತೆ ಧರ್ಮಸ್ಥಳ ಠಾಣೆಯಲ್ಲಿ ದಾಖಲಾದ ಪ್ರಕರಣದ ಎಲ್ಲಾ ದಾಖಲೆ ಹಾಗೂ ವಸ್ತುಗಳನ್ನು (ಬೆಳ್ತಂಗಡಿ ಸರ್ಕಲ್ ಇನ್ಸೆಕ್ಟರ್ ಸಂದೇಶ್.ಪಿ.ಜಿ ಜಾಗ ತೆರವಾಗಿದ್ದು ಅದರ ಚಾರ್ಜ್ ನಲ್ಲಿದ್ದ ಬಂಟ್ವಾಳ ಇನ್ಸೆಕ್ಟರ್ ಚೆಲುವರಾಜ್ ಮತ್ತು ಬೆಳ್ತಂಗಡಿ ಸರ್ಕಲ್ ಇನ್ಸೆಕ್ಟರ್ ಕಛೇರಿಯಲ್ಲಿ ತನಿಖಾ ಸಹಾಯಕರಾಗಿದ್ದ ಹೆಡ್ ಕಾನ್ಸೆಬಲ್ ವೆಂಕಟೇಶ್ ಇಬ್ಬರು ಬೆಂಗಳೂರು ಸಿಐಡಿ ಕಛೇರಿಗೆ ತೆರಳಿ ಹಸ್ತಾಂತರ ಮಾಡಿದ್ದಾರೆ.










