Monday, June 22, 2026
spot_imgspot_img
spot_imgspot_img

ದೊಡ್ಡಬಳ್ಳಾಪುರ: ಅಗ್ನಿ ಅವಘಡ – 15 ಗಂಟೆ ಕಳೆದರೂ ಹತೋಟಿಗೆ ಬಾರದ ಬೆಂಕಿ!

- Advertisement -
- Advertisement -

ಚಿಕ್ಕಬಳ್ಳಾಪುರ: ದೊಡ್ಡಬಳ್ಳಾಪುರ ಹೊರವಲಯದ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಅಡ್ವಾನ್ಸ್ ಕೇಬಲ್ ಟೆಕ್ನಾಲಜಿ ಯೂನಿಟ್-2 ಎಂಬ ಕೇಬಲ್ ವೈರ್ ತಯಾರಿಕಾ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಸೋಮವಾರ(ಮಾ.9) ಸಾಯಂಕಾಲ ಸುಮಾರು 5 ಗಂಟೆಗೆ ಬೆಂಕಿ ಕಾಣಿಸಿಕೊಂಡಿದೆ.

ಘಟನೆ ನಡೆದು 15 ಗಂಟೆಗಳಿಗೂ ಹೆಚ್ಚು ಕಾಲ ಕಳೆದಿದ್ದರೂ ಬೆಂಕಿ ಸಂಪೂರ್ಣವಾಗಿ ಹತೋಟಿಗೆ ಬಂದಿಲ್ಲ. ಸುಮಾರು 15 ಅಗ್ನಿಶಾಮಕ ವಾಹನಗಳು ಮತ್ತು ನೂರಕ್ಕೂ ಹೆಚ್ಚು ಸಿಬ್ಬಂದಿ ರಾತ್ರಿ ಪೂರ್ತಿ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಬೆಂಗಳೂರಿನಿಂದ SDRF ತಂಡ ಕೂಡ ಸ್ಥಳಕ್ಕೆ ಆಗಮಿಸಿದೆ ಎನ್ನಲಾಗಿದೆ.

ಒಂದು ಎಕರೆಗೂ ಹೆಚ್ಚು ಪ್ರದೇಶದಲ್ಲಿ ಬೆಂಕಿ ವ್ಯಾಪಿಸಿದ್ದು, ಫ್ಯಾಕ್ಟರಿಯು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ ಎಂದು ಅಂದಾಜಿಸಲಾಗಿದೆ. ಇದರಿಂದಾಗಿ ಕೋಟ್ಯಾಂತರ ರೂಪಾಯಿ ಮೌಲ್ಯದ ಆಸ್ತಿಪಾಸ್ತಿ ನಷ್ಟವಾಗಿದೆ. ಅದೃಷ್ಟವಶಾತ್, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎನ್ನಲಾಗಿದೆ. ಫ್ಯಾಕ್ಟರಿಯ ಪಕ್ಕದಲ್ಲೇ ಬೆಸ್ಕಾಂ ವಿದ್ಯುತ್ ಕೇಂದ್ರವಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಇಡೀ ಪ್ರದೇಶದ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ.

ದಟ್ಟವಾದ ಹೊಗೆಯಿಂದಾಗಿ ಬೆಂಗಳೂರು ರಾಜ್ಯ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಉಂಟಾಗಿದ್ದು, ನೀರು ಹಾಯಿಸುವ ಮೂಲಕ ಫ್ಯಾಕ್ಟರಿ ಒಳ ಭಾಗದಲ್ಲಿ ಬರುತ್ತಿರುವ ಹೊಗೆಯನ್ನು ನಿಯಂತ್ರಿಸಲು ಸಿಬ್ಬಂದಿ ಯತ್ನಿಸುತ್ತಿದ್ದಾರೆ. ಅಗ್ನಿ ಅವಘಡಕ್ಕೆ ನಿಖರವಾದ ಕಾರಣ ತಿಳಿಯಲು ಪೊಲೀಸರು ಮತ್ತು ಅಗ್ನಿಶಾಮಕ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ವರದಿಯಿಂದ ತಿಳಿದುಬಂದಿದೆ.

- Advertisement -

Related news

error: Content is protected !!