Thursday, July 16, 2026
spot_imgspot_img
spot_imgspot_img

‘ಆಪರೇಷನ್ ರೈಸ್’ ಮತ್ತು ‘ಬೇಡ ಬ್ರೋ’ ಮೂಲಕ ಮಾದಕ ವಸ್ತುಗಳ ವಿರುದ್ಧ ರಾಜ್ಯ ಸರ್ಕಾರದ ಅಭಿಯಾನ

- Advertisement -
- Advertisement -

ಮಂಗಳೂರು: ಮಾದಕ ದ್ರವ್ಯಗಳ ವಿರುದ್ಧ ಶೂನ್ಯ-ಸಹಿಷ್ಣುತೆ ನೀತಿಯನ್ನು ಘೋಷಿಸಿದ್ದು, 2028 ನೇ ಇಸವಿಯೊಳಗೆ ಕರ್ನಾಟಕವನ್ನು ಮಾದಕ ದ್ರವ್ಯ ಮುಕ್ತ ರಾಜ್ಯವನ್ನಾಗಿ ಮಾಡುವ ಉದ್ದೇಶ ಹೊಂದಿದ್ದು, ಕರ್ನಾಟಕ ಪೊಲೀಸ್ ಇಲಾಖೆಯು ಜೂನ್ 30ರಿಂದ ಆರಂಭಿಸಿರುವ ‘ಆಪರೇಷನ್ ರೈಸ್’ ಅಭಿಯಾನ ರಾಜ್ಯಾದ್ಯಂತ ಯಶಸ್ವಿಯಾಗಿ ನಡೆಯುತ್ತಿದೆ.

“ಆಪರೇಷನ್ ರೈಸ್” ಎಂಬ ಹೆಸರಿನಲ್ಲಿ ಕರ್ನಾಟಕ ಸರ್ಕಾರವು ರಾಜ್ಯವ್ಯಾಪಿ ಮಾದಕ ದ್ರವ್ಯ ವಿರೋಧಿ ಅಭಿಯಾನವನ್ನು ಜೂನ್.30 ರಂದು ಆದೇಶಿಸಿದೆ. ಇದು ರಾಜ್ಯದ “ಮಾದಕ ದ್ರವ್ಯಗಳ ವಿರುದ್ಧ ಹೋರಾಟ”ವನ್ನು ಸಮನ್ವಯಿತ ಜಾರಿ ಕ್ರಮಗಳು, ತಡೆಗಟ್ಟುವಿಕೆ ಹಾಗೂ ಪುನರ್ವಸತಿ ಕಾರ್ಯಕ್ರಮಗಳ ಮೂಲಕ ಮತ್ತೆ ಬಲಪಡಿಸುವ ಉದ್ದೇಶವನ್ನು ಹೊಂದಿದೆ. ಯುವಜನರಲ್ಲಿ ಜಾಗೃತಿ ಮೂಡಿಸುವುದು ಹಾಗೂ ವ್ಯಸನಿಗಳಿಗೆ ಸೂಕ್ತ ಪುನರ್ವಸತಿ ಸೇವೆಗಳನ್ನು ಒದಗಿಸುವುದಕ್ಕೆ ಆದ್ಯತೆ ನೀಡಲಾಗಿದೆ.

‘ಬೇಡ ಬ್ರೋ’ ಅಭಿಯಾನವು ವಿದ್ಯಾರ್ಥಿಗಳು ಹಾಗೂ ಯುವ ಉದ್ಯೋಗಿಗಳನ್ನು ಗುರಿಯಾಗಿಸಿಕೊಂಡಿದ್ದು, ಮಾದಕ ವ್ಯಸನದಿಂದ ದೂರವಿರಲು ಪ್ರೇರೇಪಿಸುವುದರ ಜೊತೆಗೆ ಆರೋಗ್ಯ ಜೀವನಶೈಲಿಯನ್ನು ಉತ್ತೇಜಿಸುವ ಮೂಲಕ ಮಾದಕ ವಸ್ತುಗಳ ಬೇಡಿಕೆಯನ್ನು ಕಡಿಮೆ ಮಾಡುವ ಉದ್ದೇಶವನ್ನು ಹೊಂದಿದೆ.

ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ, 2025ನೇ ಸಾಲಿನಲ್ಲಿ ಒಟ್ಟು 717 ಎನ್‌ಡಿಪಿಎಸ್ ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳಲ್ಲಿ 231 ಮಾರಾಟಗಾರರು ಹಾಗೂ 723 ಗ್ರಾಹಕರು ಒಳಗೊಂಡಿದ್ದಾರೆ. 2026ರ ಜೂನ್ 15ರಿಂದ ಜುಲೈ 15ರವರೆಗೆ ರಾಜ್ಯದಲ್ಲಿ 426 ಎನ್‌ಡಿಪಿಎಸ್ ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ 147 ಮಾರಾಟಗಾರರು ಹಾಗೂ 438 ಗ್ರಾಹಕರು ಒಳಗೊಂಡಿದ್ದರು. ಎನ್‌ಡಿಪಿಎಸ್ ಪ್ರಕರಣಗಳಲ್ಲಿ ಬಂಧಿತರಾದವರ ಪೈಕಿ 95 ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದು, ಇವರಲ್ಲಿ 6 ಮಂದಿ ವಿದೇಶಿ ಪ್ರಜೆಗಳಾಗಿದ್ದಾರೆ.

ಕಾರ್ಯಾಚರಣೆಯಲ್ಲಿ 150.329 ಕೆ.ಜಿ. ಗಾಂಜಾ, 7.072 ಕೆ.ಜಿ. ಸಿಂಥೆಟಿಕ್ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದ್ದು, ಇದರ ಅಂದಾಜು ಮೌಲ್ಯ ₹8.08 ಕೋಟಿ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

ಇದೇ ಅವಧಿಯಲ್ಲಿ 1,524 ಕಾಲೇಜು ವಿದ್ಯಾರ್ಥಿಗಳನ್ನು ಮಾದಕ ವಸ್ತು ಸೇವನೆಗಾಗಿ ಪರೀಕ್ಷೆಗೆ ಒಳಪಡಿಸಿದ್ದು, ಅವರಲ್ಲಿ 8 ಮಂದಿ ಪಾಸಿಟಿವ್ ಬಂದಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ, 2025ನೇ ಸಾಲಿನಲ್ಲಿ ಒಟ್ಟು 29 ಎನ್‌ಡಿಪಿಎಸ್ ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳಲ್ಲಿ 33 ಮಾರಾಟಗಾರರು ಹಾಗೂ 20 ಗ್ರಾಹಕರು ವಿರುದ್ಧ ಪ್ರಕರಣಗಳು ದಾಖಲಾಗಿದೆ. 2026 ರ ಜುಲೈ 15 ರವರೆಗೆ ಒಟ್ಟು 44 ಎನ್‌ಡಿಪಿಎಸ್ ಪ್ರಕರಣಗಳು ದಾಖಲಾಗಿದ್ದು, 44 ಮಾರಾಟಗಾರರು ಹಾಗೂ 48 ಗ್ರಾಹಕರು ವಿರುದ್ಧ ಪ್ರಕರಣಗಳು ದಾಖಲಾಗಿದೆ.

ಜಿಲ್ಲೆಯಲ್ಲಿ ಇದೇ ಅವಧಿಯಲ್ಲಿ 44 ಎನ್‌ಡಿಪಿಎಸ್ ಪ್ರಕರಣಗಳು ದಾಖಲಾಗಿದ್ದು, 92 ಮಂದಿಯನ್ನು ಬಂಧಿಸಲಾಗಿದೆ. 106.90 ಕೆ.ಜಿ. ಗಾಂಜಾ, 656.36 ಗ್ರಾಂ ಎಂಡಿಎಂಎ, ಹಾಗೂ 1.02 ಗ್ರಾಂ ಮೆಥಾಂಫೆಟಮೈನ್ ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಮಾದಕ ವಸ್ತುಗಳ ಅಂದಾಜು ಮೌಲ್ಯ ₹1.11 ಕೋಟಿ.

ಜಿಲ್ಲೆಯಲ್ಲಿ 174 ಶಿಕ್ಷಣ ಸಂಸ್ಥೆಗಳು ಹಾಗೂ 101 ಆಂಟಿ ಡ್ರಗ್ ಸಮಿತಿಗಳನ್ನು ಸಕ್ರಿಯಗೊಳಿಸಲಾಗಿದ್ದು, ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು, ಅಂಡರ್‌ಕವರ್ ಕಾರ್ಯಾಚರಣೆ, ಮೊಬೈಲ್ ಫೋರೆನ್ಸಿಕ್ ಲ್ಯಾಬ್ ಬಳಕೆ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ.

ರಾಜ್ಯ ಸರ್ಕಾರದ ‘ಆಪರೇಷನ್ ರೈಸ್’ ಮತ್ತು ‘ಬೇಡ ಬೋ’ ಉಪಕ್ರಮಗಳು ಕಾನೂನು ಜಾರಿ, ಸಾರ್ವಜನಿಕ ಜಾಗೃತಿ, ಪುನರ್ವಸತಿ ಹಾಗೂ ಸಮುದಾಯದ ಸಕ್ರಿಯ ಸಹಭಾಗಿತ್ವದ ಮೂಲಕ ಮಾದಕ ವಸ್ತುಗಳ ವಿರುದ್ಧ ಸಮಗ್ರ ಹೋರಾಟವನ್ನು ಮುನ್ನಡೆಸುತ್ತವೆ. ಬಲಪಡಿಸುತ್ತಿರುವ ಈ ಅಭಿಯಾನವು ಸುರಕ್ಷಿತ, ಆರೋಗ್ಯಕರ ಹಾಗೂ ವ್ಯಸನಮುಕ್ತ ಸಮಾಜ ನಿರ್ಮಾಣದಲ್ಲಿ ಮಹತ್ವದ ಹೆಜ್ಜೆಯಾಗಿದ್ದು, ಯುವಜನರನ್ನು ಮಾದಕ ವ್ಯಸನದಿಂದ ದೂರವರಿಸಿ ಉತ್ತಮ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಮಾದಕ ವಸ್ತುಗಳ ಮಾರಾಟ, ಸಾಗಾಟ ಹಾಗೂ ಸೇವನೆ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿಯಡಿ ಪೊಲೀಸ್ ಇಲಾಖೆ ಮುಂದುವರಿದು ಕಠಿಣ ಕ್ರಮ ಕೈಗೊಳ್ಳಲಿದೆ.

- Advertisement -

Related news

error: Content is protected !!