


ಮೈಸೂರು: ಅಭಿಮನ್ಯು ಆನೆ ನಿವೃತ್ತಿಯಾದ ಬಳಿಕ ಉದ್ಭವಿಸಿದ್ದ ದಸರಾ ಗಜಪಡೆ ಕ್ಯಾಪ್ಟನ್ ವಿಚಾರಕ್ಕೆ ಇದೀಗ ತೆರೆಬಿದ್ದಿದ್ದು, ಈ ಬಾರಿ ಜಂಬೂ ಸವಾರಿಯಲ್ಲಿ ಮೊದಲ ಬಾರಿಗೆ ಚಿನ್ನದ ಅಂಬಾರಿಯನ್ನು ಪ್ರಶಾಂತ ಆನೆ ಹೊರಲಿದ್ದಾನೆ. ಈ ಸಂಬಂಧ ರಾಜ್ಯ ಸರ್ಕಾರ ಅಧಿಕೃತ ಘೋಷಣೆ ಹೊರಡಿಸಿದೆ.
ಜಿಲ್ಲಾ ಉಸ್ತುವಾರಿ ಸಚಿವ ಯತೀಂದ್ರ ಸಿದ್ದರಾಮಯ್ಯನವರು ಮಾತನಾಡಿ, ಈ ಬಾರಿ 3 ಆನೆಯನ್ನು ದಸರಾಗೆ ಕರೆ ತಂದಿದ್ದೇವೆ. ಈ ಪೈಕಿ ಸ್ವಭಾವ, ದೈಹಿಕ ಸಾಮರ್ಥ್ಯ, ನಡವಳಿಕೆ ಆಧಾರದ ಮೇಲೆ ಪ್ರಶಾಂತನನ್ನು ಆಯ್ಕೆ ಮಾಡಿದ್ದೇವೆ. ಧನಂಜಯ ಆನೆ ಮೀಸಲು ಆನೆ ಆಗಿರುತ್ತದೆ ಎಂದು ತಿಳಿಸಿದ್ದಾರೆ.
54 ವರ್ಷದ ಪ್ರಶಾಂತನು ದುಬಾರೆ ಆನೆ ಶಿಬಿರದಾಗಿದ್ದು, ಒಟ್ಟು 5,100 ಕೆ.ಜಿ ತೂಕವನ್ನು ಹೊಂದಿದ್ದಾನೆ. ಈ ಆನೆಯನ್ನು 1993ರಲ್ಲಿ ಶಿವಮೊಗ್ಗ ಜಿಲ್ಲೆಯ ಕಾರೆಕೊಪ್ಪ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆಯು ಯಶಸ್ವಿಯಾಗಿ ಸೆರೆಹಿಡಿದಿತ್ತು. ಪ್ರಬಲ ದೇಹ ಹಾಗೂ ಗಂಭೀರ ನಡವಳಿಕೆಯುಳ್ಳ ಈ ಆನೆಯನ್ನು ಪಳಗಿಸಿ ವಿಶಿಷ್ಟ ತರಬೇತಿಗೆ ಒಳಪಡಿಸಲಾಗಿತ್ತು.
ಬಲಿಷ್ಠ ಹಾಗೂ ನಂಬಿಕಸ್ಥ ಆನೆಯಾಗಿ ಅರಣ್ಯ ಇಲಾಖೆಯ ವಿವಿಧ ಕಾರ್ಯಾಚರಣೆಗಳಲ್ಲಿ ಮೌಲ್ಯಯುತ ಸೇವೆ ಸಲ್ಲಿಸಿದ ಈ ಆನೆಯು ಕಳೆದ 18 ವರ್ಷಗಳಿಂದ ಮೈಸೂರು ದಸರಾ ಮಹೋತ್ಸವದಲ್ಲಿ ನಿರಂತರವಾಗಿ ಭಾಗವಹಿಸುತ್ತಿದ್ದು, ಉತ್ಸವದ ಪ್ರಮುಖ ಆಕರ್ಷಣೆಯಾಗಿದೆ. ಅದರ ಶಿಸ್ತುಬದ್ಧ ನಡೆ, ಸತತ ಸೇವೆ ಮತ್ತು ಆಜ್ಞಾಪಾಲನೆಯು ಈ ಆನೆಯನ್ನು ದಸರಾ ಆನೆಗಳ ಪೈಕಿ ಅತ್ಯಂತ ನಂಬಿಕಸ್ಥ ಸದಸ್ಯನನ್ನಾಗಿ ಪರಿಗಣಿಸಿದೆ.
ಈ ಆನೆಯು ತನ್ನ ಶಕ್ತಿಯುತ ಸ್ಥಿತಿಯಿಂದ ಭದ್ರತೆಗೆ ಸಹಕಾರಿಯಾಗಿರುತ್ತದೆ. ಪ್ರತಿ ದಸರಾ ಮೆರವಣಿಗೆಯಲ್ಲಿ ಇದೊಂದು ಶಾಂತಿಯುತ ಶಕ್ತಿಯ ಸಂಕೇತವಾಗಿ ಬೆಳಗುತ್ತದೆ. 3 ದಶಕಗಳ ಸೇವಾ ಪೈಪೋಟಿಯ ಜೊತೆಗೆ, ಈ ಆನೆ ಇಂದು ದಸರಾ ಪರಂಪರೆಯ ಜೀವಂತ ಚಿಹ್ನೆಯಾಗಿದೆ. ಕಳೆದ ಬಾರಿ ದಸರಾದಲ್ಲಿ ಸಾಲಾನೆಯಾಗಿ ಭಾಗವಹಿಸಿತ್ತು.
ಜಂಬೂಸವಾರಿಯ ಸುಗಮ ನಿರ್ವಹಣೆಗಾಗಿ ಧನಂಜಯ ಆನೆಯನ್ನು ಮೀಸಲು ಅಂಬಾರಿ ಆನೆಯಾಗಿ, ಅಭಿಮನ್ಯು ಆನೆಯನ್ನು ನಿಶಾನೆ ಆನೆಯಾಗಿ ಹಾಗೂ ಗೋಪಿ ಆನೆಯನ್ನು ನೌಫತ್ ಅನೆಯಾಗಿ ನಿಯೋಜಿಸಲು ಶಿಫಾರಸು ಮಾಡಲಾಗಿದೆ ಎಂದು ತಿಳಿದುಬಂದಿದೆ.








