




ಮನಿಲಾ: ದಕ್ಷಿಣ ಫಿಲಿಪೈನ್ಸ್ನಲ್ಲಿ 7.8 ತೀವ್ರತೆಯ ಭೂಕಂಪ ಸಂಭವಿಸಿದ್ದು, ಓರ್ವ ಸಾವನ್ನಪ್ಪಿ, ಹಲವರು ಗಾಯಗೊಂಡಿರುವ ಘಟನೆ ನಡೆದಿದೆ. ಜೊತೆಗೆ ಸುನಾಮಿ ಎಚ್ಚರಿಕೆ ಕೂಡ ನೀಡಲಾಗಿದೆ.
ದಕ್ಷಿಣ ಫಿಲಿಪೈನ್ಸ್ನ ಮಿಂಡಾನಾವೊ ಪ್ರದೇಶದಲ್ಲಿ ಸೋಮವಾರ ಬೆಳಗ್ಗೆ ಭೂಕಂಪ ಸಂಭವಿಸಿದೆ. ಇದರ ಬೆನ್ನಲ್ಲೇ, ಅಲ್ಲಿನ ಸರ್ಕಾರ ಮತ್ತು ಅಂತರರಾಷ್ಟ್ರೀಯ ರಕ್ಷಣಾ ಸಂಸ್ಥೆಗಳು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುತ್ತಿವೆ.
ಮುಂಚಿತವಾಗಿಯೇ ಸಿದ್ಧವಾಗಿದ್ದ ವಿಪತ್ತು ನಿರ್ವಹಣಾ ನೀತಿಗಳಿಂದಾಗಿ ಭಾರಿ ಪ್ರಮಾಣದ ಪ್ರಾಣಹಾನಿ ತಪ್ಪಿದೆ. ಒರ್ವ ಮೃತಪಟ್ಟು, ನಾಲ್ವರು ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಅತ್ಯಾಧುನಿಕ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ.
ಭೂಕಂಪದ ಕೇಂದ್ರಬಿಂದು ಬುರಿಯಾಸ್‌ನಿಂದ 24.7 ಕಿ.ಮೀ ದೂರದಲ್ಲಿ ಪತ್ತೆಯಾಗಿದ್ದು, ಭೂಕಂಪದ ಕೇಂದ್ರಬಿಂದು ಪತ್ತೆ ಹಚ್ಚಿ ತಕ್ಷಣ ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರ ಮತ್ತು ಜಪಾನ್ ಹವಾಮಾನ ಇಲಾಖೆ ಜಂಟಿಯಾಗಿ ಫಿಲಿಪೈನ್ಸ್, ಇಂಡೋನೇಷ್ಯಾ, ತೈವಾನ್ ಮತ್ತು ಜಪಾನ್ ಕರಾವಳಿ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ನೀಡಿದೆ.
ಕರಾವಳಿ ಭಾಗದ ಜನರನ್ನು ತಕ್ಷಣವೇ ಎತ್ತರ ಹಾಗೂ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಪ್ರಕ್ರಿಯೆ ನಡೆಯುತ್ತಿದೆ. ಕಡಲ ಅಲೆಗಳ ಏರಿಳಿತವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ವರದಿಯಿಂದ ತಿಳಿದುಬಂದಿದೆ.








