


ಇಂಜಿನಿಯರಿಂಗ್ ವಿದ್ಯಾರ್ಥಿಯೋರ್ವ ಚೀನಾ ಲೋನ್ ಆ್ಯಪ್‌ನ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮೃತರನ್ನು ತೇಜಸ್ (22) ಎಂದು ಗುರುತಿಸಲಾಗಿದೆ.
ಜಾಲಹಳ್ಳಿ ಬಳಿಯ ಎಚ್‌ಎಂಟಿ ಲೇಔಟ್ ನಿವಾಸಿ ಗೋಪಿನಾಥ್ ಅವರ ಮಗನಾದ ತೇಜಸ್, ನಿಟ್ಟೆ ಮೀನಾಕ್ಷಿ ತಾಂತ್ರಿಕ ಶಿಕ್ಷಣ ಸಂಸ್ಥೆಯಲ್ಲಿ ಬಿ.ಇ ಓದುತ್ತಿದ್ದರು. ಅವರು ಸ್ಟೈಲ್ಸ್ ಪೇ, ಕಿಸಾತ್ ಸೇರಿದಂತೆ ಚೀನಾ ಮೂಲದ ಹಲವು ಲೋನ್ ಆ್ಯಪ್ ಕಂಪೆನಿಗಳಿಂದ ಮಹೇಶ್ ಎಂಬ ಸ್ನೇಹಿತನಿಗೆ 46 ಸಾವಿರ ರೂ. ಸಾಲ ಕೊಡಿಸಿದ್ದರು. ಆದರೆ, ಮಹೇಶ್ ಅವರು ಸಾಲದ ಇಎಂಐ ಕಟ್ಟಿರಲಿಲ್ಲ. ಹೀಗಾಗಿ, ಲೋನ್ ಆ್ಯಪ್ ಕಂಪೆನಿ ಪ್ರತಿನಿಧಿಗಳು ತೇಜಸ್‌ಗೆ ಕರೆ ಮಾಡಿ ಕಿರುಕುಳ ನೀಡುತ್ತಿದ್ದರು ಎಂದು ಜಾಲಹಳ್ಳಿ ಠಾಣೆ ಪೊಲೀಸರು ತಿಳಿಸಿದ್ದಾರೆ.
ಅಪ್ ಕಂಪೆನಿಯವರು ಸಾಲ ಮರುಪಾವತಿಸದಿದ್ದರೆ ತೇಜಸ್‌ರ ಫೋಟೊಗಳನ್ನು ಅಶ್ಲೀಲ ರೂಪಕ್ಕೆ ತಿರುಚಿ ಸಂಬಂಧಿಕರು ಮತ್ತು ಸ್ನೇಹಿತರ ವಾಟ್ಸ್‌ಆ್ಯಪ್‌ಗೆ ಕಳುಹಿಸುವುದಾಗಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದಾಗಿ ಬೆದರಿಸಿದ್ದರು. ಇದರಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದ ತೇಜಸ್, ಮಂಗಳವಾರ ಸಂಜೆ ಕುಟುಂಬ ಸದಸ್ಯರೆಲ್ಲಾ ಹೊರಗೆ ಹೋಗಿದ್ದಾಗ ಮನೆಯಲ್ಲಿ ನೇಣು ಹಾಕಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ತೇಜಸ್, ಈ ಹಿಂದೆ ಮೂರ್ನಾಲ್ಕು ಬಾರಿ ಚೀನಾದ ಲೋನ್ ಆ್ಯಪ್‌ಗಳಿಂದ ಸಾಲ ಪಡೆದು ಮರು ಪಾವತಿ ಮಾಡಿದ್ದ ಅದೇ ರೀತಿ ಮತ್ತೆ ಸಾಲ ತೆಗೆದುಕೊಂಡಿದ್ದ. ಆದರೆ, ಈ ವಿಚಾರವನ್ನು ನಮಗೆ ತಿಳಿಸಿರಲಿಲ್ಲ. ಆ್ಯಪ್ ಕಂಪೆನಿ ಪ್ರತಿನಿಧಿಗಳು ಇತ್ತೀಚೆಗೆ ನಮಗೆ ಕರೆ ಮಾಡಿದಾಗಲೇ ಸಾಲದ ವಿಚಾರ ಗೊತ್ತಾಯಿತು. ಕಂಪೆನಿಯವರು ಮಂಗಳವಾರ ಸಹ ತೇಜಸ್‌ಗೆ ಹಲವು ಬಾರಿ ಕರೆ ಮಾಡಿದ್ದರು. ಆದರೆ, ತೇಜಸ್ ಕರೆ ಸ್ವೀಕರಿಸಿರಲಿಲ್ಲ. ಹೀಗಾಗಿ, ಕಂಪೆನಿಯವರು ನಮಗೆ ಕರೆ ಮಾಡಿ ಸಾಲ ಮರು ಪಾವತಿಸುವಂತೆ ಬೆದರಿಸಿದ್ದರು ಎಂದು ತೇಜಸ್ ಕುಟುಂಬ ಸದಸ್ಯರು ಕಣ್ಣೀರಿಟ್ಟರು.
ಅಪ್ಪ ಅಮ್ಮ ನನ್ನನ್ನು ಕ್ಷಮಿಸಿ, ನಾನು ಮಾಡಿರುವ ತಪ್ಪಿಗೆ ಬೇರೆ ದಾರಿಯಿಲ್ಲ. ನಾನು ಮಾಡಿರುವ ಸಾಲ ತೀರಿಸಲು ಆಗೋದಿಲ್ಲ. ಅದಕ್ಕಾಗಿ ಇದು ನನ್ನ ಕೊನೆಯ ತೀರ್ಮಾನ ನನ್ನನ್ನು ಕ್ಷಮಿಸಿ ಬಿಡಿ. ಥ್ಯಾಂಕ್ಸ್ ಗುಡ್‌ಬೈ, ಎಂದು ತೇಜಸ್ ಆತ್ಮಹತ್ಯೆಗೂ ಮುನ್ನ ಪತ್ರ ಬರೆದಿಟ್ಟಿದ್ದಾರೆ.