

ಉಳ್ಳಾಲ: ಉಳ್ಳಾಲದ ಕಲ್ಲಾಪುವಿನಲ್ಲಿರುವ ಗ್ಲೋಬಲ್ ಮಾರುಕಟ್ಟೆಯಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಅಪಾರ ಪ್ರಮಾಣದ ನಷ್ಟ ಸಂಭವಿಸಿದ ಘಟನೆ ಇಂದು ಮುಂಜಾನೆ 4 ಗಂಟೆ ವೇಳೆಗೆ ನಡದಿರುವ ಬಗ್ಗೆ ವರದಿಯಾಗಿದೆ.
ಎಂಟು ಹಣ್ಣಿನ ಮಳಿಗೆಗಳು ಸಂಪೂರ್ಣ ಭಸ್ಮವಾಗಿದ್ದು, ಒಂದೇ ಸಾಲಿನಲ್ಲಿರುವ 24 ಮಳಿಗೆಗಳಿಗೆ ಬೆಂಕಿ ವ್ಯಾಪಿಸಿ ಲಕ್ಷಾಂತರ ಮೌಲ್ಯದ ಹಣ್ಣುಗಳು ಬೆಂಕಿಗೆ ಆಹುತಿಯಾಗಿದೆ.. ಎಸ್ ಎನ್ ಫ್ರೂಟ್ಸ್ ಮಾಲೀಕರು ಭಾನುವಾರ ಸಂಜೆ ವೇಳೆಯಷ್ಟೇ ರೂ. 40 ಲಕ್ಷದ ಹಣ್ಣುಹಂಪಲುಗಳನ್ನು ಮಾರಾಟಕ್ಕೆ ತರಿಸಿದ್ದರು. ಎಲ್ಲಾ ಮಳಿಗೆಗಳಲ್ಲಿ ಫ್ರೀಝರ್ ಗಳಿದ್ದೂ, ಅವುಗಳು ಸುಟ್ಟುಹೋಗಿವೆ.
ರಾತ್ರಿ 2.30 ರ ಸುಮಾರಿಗೆ ಬೀಗ ಹಾಕಿದ್ದ ಅಂಗಡಿಗಳ ಒಳಗಿನಿಂದ ಬೆಂಕಿ ಕಾಣಿಸಿಕೊಂಡಿದ್ದು ಒಮ್ಮಿಂದೊಮ್ಮೆಲೇ 25 ಅಂಗಡಿಗಳಿಗೇ ವ್ಯಾಪಿಸಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಈ ಘಟನೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಮಂಗಳೂರಿನಿಂದ ಅಗ್ನಿಶಾಮಕ ದಳದವರು ಸ್ಥಳಕ್ಕಾಗಮಿಸಿ ಕಾರ್ಯಾಚರಣೆ ಕೈಗೊಂಡ ಹಿನ್ನೆಲೆಯಲ್ಲಿ ದುರದೃಷ್ಟವಶಾತ್ ಉಳಿದ 60 ಅಂಗಡಿಗಳಿಗೆ ಬೆಂಕಿ ತಗುಲಲಿಲ್ಲ.
ಘಟನಾ ಸ್ಥಳಕ್ಕೆ ಕಾಂಗ್ರೆಸ್ ಮುಖಂಡರು, ಕೆಪಿಸಿಸಿ ಪ್ರಧಾನ ಕಾಯದರ್ಶಿ ಪದ್ಮರಾಜ್ ಆರ್. ಪೂಜಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಅಧಿಕಾರಿಗಳೊಂದಿಗೆ ಮಾತನಾಡಿ ಗರಿಷ್ಠ ಪ್ರಮಾಣದಲ್ಲಿ ಪರಿಹಾರ ದೊರಕಿಸಿಕೊಡುವಂತೆ ಸೂಚಿಸಿದರು.ಬೆಂಕಿಗಾಹುತಿಯಾದ ಅಂಗಡಿ ಮಾಲೀಕರೊಂದಿಗೆ ಮಾತನಾಡಿದ ಪದ್ಮರಾಜ್‌ರವರು ನಿಮ್ಮೊಂದಿಗೆ ನಾವಿದ್ದೇವೆ ಎಂದು ಭರವಸೆ ನೀಡಿದರು.








