Saturday, July 5, 2025
spot_imgspot_img
spot_imgspot_img

ಅಪಾರ್ಟ್ಮೆಂಟ್​ನಲ್ಲಿ ಒಂದೇ ಕುಟುಂಬದ ನಾಲ್ವರ ಸಾವು..!

- Advertisement -
- Advertisement -

ಮೈಸೂರು: ಅಪಾರ್ಟ್ಮೆಂಟ್​​ನಲ್ಲಿ ಬಾಲಕ ಸೇರಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಘಟನೆ ಮೈಸೂರಿನ ವಿಶ್ವೇಶ್ವರಯ್ಯನಗರದಲ್ಲಿ ನಡೆದಿದೆ.

ಮೃತಪಟ್ಟವರನ್ನು ಕುಶಾಲ್ ​(15), ಚೇತನ್​​ (45), ರೂಪಾಲಿ (43), ಪ್ರಿಯಂವಧಾ (62) ಎಂದು ಗುರುತಿಸಲಾಗಿದೆ.

ಚೇತನ್​​​ ಮೊದಲಿಗೆ ತಾಯಿ ಪ್ರಿಯಂವಧಾ, ಪತ್ನಿ ರೂಪಾಲಿ ಮತ್ತು ಮಗ ಕುಶಾಲ್​ಗೆ ವಿಷವುಣಿಸಿ ಸಾಯಿಸಿರುವ ಶಂಕೆ ವ್ಯಕ್ತವಾಗಿದೆ. ಮೂವರಿಗೆ ವಿಷವುಣಿಸಿ ಸಾಯಿಸಿ ಬಳಿಕ ಚೇತನ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಅನುಮಾನ ವ್ಯಕ್ತವಾಗಿದೆ. ಸ್ಥಳಕ್ಕೆ ಮೈಸೂರು ಪೊಲೀಸ್ ಕಮಿಷನರ್​ ಸೀಮಾ ಲಾಟ್ಕರ್, ಡಿಸಿಪಿ ಜಾಹ್ನವಿ, ವಿದ್ಯಾರಣ್ಯಪುರಂ ಇನ್ಸ್​ಪೆಕ್ಟರ್​ ಮೋಹಿತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಪೊಲೀಸ್ ಕಮಿಷನರ್​ ಸೀಮಾ ಲಾಟ್ಕರ್ ಮಾತನಾಡಿ, ವಿದ್ಯಾರಣ್ಯಪುರಂ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಚೇತನ್ ಕುಟುಂಬ ಹಾಗೂ ಚೇತನ್​ ತಾಯಿ ಪ್ರಿಯಂವಧಾ ಅಕ್ಕಪಕ್ಕದ ಫ್ಲ್ಯಾಟ್​ನಲ್ಲಿ ವಾಸವಿದ್ದರು. ತಾಯಿ ಒಂದು ಕಡೆ ಇದ್ದರು, ಮಗ ಇನ್ನೊಂದು ಕಡೆ ಇದ್ದರು. ತಾಯಿ ಪ್ರಿಯಂವಧಾ ಮತ್ತು ಮಗ ಚೇತನ್ ಕುಟುಂಬ ಒಟ್ಟಾಗಿ ರವಿವಾರ ಗೊರೂರಿಗೆ ಹೋಗಿದ್ದರು ಎಂದು ತಿಳಿಸಿದರು.

ಗೊರೂರು ದೇವಸ್ಥಾನಕ್ಕೆ ಹೋಗಿ ಸಂಜೆ ಮನೆಗೆ ಬಂದಿದ್ದರು. ಮೃತ ಚೇತನ್ ಹಾಸನ ಜಿಲ್ಲೆ ಗೊರೂರು ಮೂಲದ ನಿವಾಸಿಯಾಗಿದ್ದರು. ಚೇತನ್ ಪತ್ನಿ ರೂಪಾಲಿ ಮೈಸೂರಿನ ನಿವಾಸಿಯಾಗಿದ್ದರು. 2019 ರಿಂದ ಚೇತನ್ ಮತ್ತು ರೂಪಾಲಿ ಮೈಸೂರಿನಲ್ಲೇ ನೆಲೆಸಿದ್ದರು. ಕೇಸ್ ದಾಖಲಿಸಿಕೊಂಡು ತನಿಖೆ ನಡೆಸ್ತಿದ್ದೇವೆ. ಚೇತನ್​​ ಕಾರ್ಮಿಕರನ್ನು ಸೌದಿಗೆ ಕಳಿಸುವ ಕೆಲಸ ಮಾಡುತ್ತಿದ್ದರು ಎಂದು ಹೇಳಿದರು.

ಚೇತನ್ ಆತ್ಮಹತ್ಯೆಗೂ ಮುನ್ನ ಡೆತ್​ನೋಟ್ ಬರೆದಿಟ್ಟಿದ್ದಾರೆ. ನಮ್ಮ ಸಾವಿಗೆ ನಾವೇ ಕಾರಣ‌. ಹಣಕಾಸಿನ ಸಮಸ್ಯೆಯಿಂದಾಗಿ ನಾವು ಸಾಯುತ್ತಿದ್ದೇವೆ‌. ನಮ್ಮ ಸಾವಿಗೆ ಬೇರೆ ಯಾರೂ ಕಾರಣರಲ್ಲ. ನನ್ನ ಸ್ನೇಹಿತರು, ಸಂಬಂಧಕರಿಗೆ ಯಾರೂ ತೊಂದರೆ ಕೊಡಬೇಡಿ. ನಮ್ಮನ್ನು ಕ್ಷಮಿಸಿಬಿಡಿ, I AM SORRY ಎಂದು ಡೆತ್​ನೋಟ್​ನಲ್ಲಿ ಬರೆದಿದ್ದಾರೆ.​

- Advertisement -

Related news

error: Content is protected !!