Monday, July 20, 2026
spot_imgspot_img
spot_imgspot_img

ಬೆಂಗಳೂರು : ಆನ್‌ಲೈನ್ ಹೂಡಿಕೆ ಹೆಸರಲ್ಲಿ ವಂಚನೆ; 5.95 ಕೋಟಿ ರೂ. ಕಳೆದುಕೊಂಡ ವ್ಯಕ್ತಿ

- Advertisement -
- Advertisement -

ಬೆಂಗಳೂರು : 50 ವರ್ಷದ ವ್ಯಕ್ತಿಯೊಬ್ಬರು ಆನ್‌ಲೈನ್ ಹೂಡಿಕೆ ವಂಚನೆ ಜಾಲಕ್ಕೆ ಬಲಿಯಾಗಿ ಕೋಟ್ಯಂತರ ರೂ. ಕಳೆದುಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹೂಡಿಕೆ ಮಾರ್ಗದರ್ಶನ ನೀಡುವ ನೆಪದಲ್ಲಿ ಪರಿಚಯವಾದ ಮಹಿಳೆಯನ್ನು ನಂಬಿ, ನಕಲಿ ಟ್ರೇಡಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ 5.95 ಕೋಟಿ ರೂ. ಹಣ ಹೂಡಿಕೆ ಮಾಡಿ ವಂಚನೆಗೊಳಗಾಗಿದ್ದಾರೆ.

ಸಂತ್ರಸ್ತ ವ್ಯಕ್ತಿಗೆ ಅವರ ಸ್ನೇಹಿತರು ಮೊದಲು ಪಿಯು ಪ್ರೈಮ್ ಎಂಬ ಆನ್‌ಲೈನ್ ಟ್ರೇಡಿಂಗ್ ವೇದಿಕೆಯ ಬಗ್ಗೆ ಮಾಹಿತಿ ನೀಡಿದ್ದರು. ಆದರೆ, ಅವರಿಗೆ ಆನ್‌ಲೈನ್ ಹೂಡಿಕೆಯ ಬಗ್ಗೆ ಹೆಚ್ಚಿನ ಜ್ಞಾನವಿಲ್ಲದ ಕಾರಣ, ಅವರು ಗೂಗಲ್ ಮತ್ತು ಫೇಸ್‌ಬುಕ್‌ನಲ್ಲಿ ವೃತ್ತಿಪರ ಮಾರ್ಗದರ್ಶನಕ್ಕಾಗಿ ಹುಡುಕಾಟ ನಡೆಸಿದ್ದರು.

ಈ ವೇಳೆ ಅವರಿಗೆ ಶಿಲ್ಪಾ ಶಿವಕುಮಾರ್’ ಎಂಬಾಕೆಯ ಪರಿಚಯವಾಗಿ, ಇಬ್ಬರ ನಡುವೆ ಲಾಭ ಹಂಚಿಕೆಯ ಒಪ್ಪಂದ ಏರ್ಪಟ್ಟ ಬಳಿಕ, ಆಕೆ ಇದು ಭಾರತೀಯ ಟ್ರೇಡರ್ಸ್‌ಗಳಿಗಾಗಿಯೇ ಇರುವ ಅಧಿಕೃತ ವೇದಿಕೆ ಎಂದು ನಂಬಿಸಿ ವಂಚನೆಯ ಜಾಲತಾಣದಲ್ಲಿ ನೋಂದಣಿ ಮಾಡಿಸಿದ್ದಳು.

ಸಂತ್ರಸ್ತ ವ್ಯಕ್ತಿ ಆ ಪ್ಲಾಟ್‌ಫಾರ್ಮ್‌ನಲ್ಲಿ ಟ್ರೇಡಿಂಗ್ ಆರಂಭಿಸಿದಾಗ, ಅದರ ಡ್ಯಾಶ್‌ಬೋರ್ಡ್‌ನಲ್ಲಿ ಭಾರಿ ಪ್ರಮಾಣದ ಲಾಭ ಕಾಣತೊಡಗಿತ್ತು. ಆರಂಭದಲ್ಲಿ ಸ್ವಲ್ಪ ಹಣವನ್ನು ಹಿಂಪಡೆಯಲು ಅವಕಾಶ ಸಿಕ್ಕಿದ್ದರಿಂದ ಅವರಿಗೆ ನಂಬಿಕೆ ಹೆಚ್ಚಾಗಿ, ಪ್ಲಾಟ್‌ಫಾರ್ಮ್‌ನ ಅಸಲಿಯತ್ತನ್ನು ಪರೀಕ್ಷಿಸಲು ಅವರು ಬೇರೊಂದು ಖಾತೆಯನ್ನು ತೆರೆದಾಗಲೂ ಅದರಲ್ಲಿ ಲಾಭ ತೋರಿಸಲಾಗಿತ್ತು. ಆದರೆ, ಆ ನಕಲಿ ಆ್ಯಪ್ ಅನ್ನು ಕೇವಲ ಸುಳ್ಳು ಲಾಭ ತೋರಿಸಲೆಂದೇ ವಿನ್ಯಾಸಗೊಳಿಸಲಾಗಿತ್ತು ಎಂಬುದು ಅವರಿಗೆ ತಿಳಿದಿರಲಿಲ್ಲ.

ಇದನ್ನೇ ಬಂಡವಾಳ ಮಾಡಿಕೊಂಡ ವಂಚಕರು, ಹೂಡಿಕೆಯನ್ನು ಹೆಚ್ಚಿಸುವಂತೆ ನಿರಂತರವಾಗಿ ಪ್ರಚೋದಿಸುತ್ತಿದ್ದರು. ಕೊನೆಗೆ ಸಂತ್ರಸ್ತರು ತಮ್ಮ ಮತ್ತು ಪತ್ನಿಯ ಖಾತೆಯಿಂದ ಹಂತ ಹಂತವಾಗಿ ಒಟ್ಟು 5.95 ಕೋಟಿ ರೂ. ಹಣವನ್ನು ಹೂಡಿಕೆ ಮಾಡಿದ್ದರು. ಒಂದು ಹಂತದಲ್ಲಿ ಅವರ ಟ್ರೇಡಿಂಗ್ ಖಾತೆಯಲ್ಲಿ ಬರೋಬ್ಬರಿ 50 ಕೋಟಿ ರೂ. ಲಾಭ ಇರುವುದು ಕಾಣಿಸುತ್ತಿತ್ತು.

ಆದರೆ, ಆ ಹಣವನ್ನು ಹಿಂಪಡೆಯಲು ಹೋದಾಗ ತಾವೇ ಸೈಬರ್ ವಂಚನೆಗೆ ಒಳಗಾಗಿರುವುದು ಬೆಳಕಿಗೆ ಬಂದಿದ್ದು, ಮೇ 28ರಂದು ಅವರು ಸೈಬ‌ರ್ ಕ್ರೈಂ ಪೊಲೀಸ್‌ ಠಾಣೆಗೆ ತೆರಳಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ ಎಂಬುದಾಗಿ ವರದಿಯಿಂದ ತಿಳಿದುಬಂದಿದೆ.

- Advertisement -

Related news

error: Content is protected !!