Thursday, August 6, 2026
spot_imgspot_img
spot_imgspot_img

ಯುವತಿಗೆ ವಂಚನೆ ಪ್ರಕರಣ; ಅಪರಾಧಿ ನಿತೇಶ್‌ಗೆ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ

- Advertisement -
- Advertisement -

ಅಪರಾಧಿ ತಂದೆ ರಾಮಣ್ಣ ಪೂಜಾರಿಗೆ 1 ವರ್ಷ ಕಠಿಣ ಕಾರಾಗೃಹ ಶಿಕ್ಷೆ

ಮಂಗಳೂರು: ಮದುವೆಯಾಗುವುದಾಗಿ ನಂಬಿಸಿ ಯುವತಿಯೊಂದಿಗೆ ಬಲವಂತವಾಗಿ ದೈಹಿಕ ಸಂಪರ್ಕ ನಡೆಸಿ ವಂಚಿಸಿರುವ ಕಬಕ ನಿವಾಸಿ ಆರೋಪಿಗೆ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದ್ದು ಯುವತಿಗೆ ಬೆದರಿಕೆ ಹಾಕಿದ್ದ ಆತನ ತಂದೆ ಮತ್ತು ಬಾವನಿಗೆ 5 ವರ್ಷಗಳ ಶಿಕ್ಷೆ ವಿಧಿಸಿ ಆದೇಶ ನೀಡಿದೆ.

ಕಬಕ ನಿವಾಸಿ ನಿತೇಶ್ ಪೂಜಾರಿ(30ವ.) ಮತ್ತು ಆತನ ತಂದೆ ರಾಮಣ್ಣ ಪೂಜಾರಿಂದ ಮತ್ತು ಬಾವ ನಿಖಿತಾಶ್ ಸುವರ್ಣ (40ವ.)ಶಿಕ್ಷೆ ವಿಧಿಸಲ್ಪಟ್ಟವರು.

ಯುವತಿಯೊಬ್ಬರನ್ನು ಮದುವೆಯಾಗುವುದಾಗಿ ನಂಬಿಸಿ ಆಕೆಯನ್ನು ಸುತ್ತಾಡಿಸಿದ್ದ. ಬಳಿಕ ನಿತೇಶ್ ಆಕೆಯನ್ನು ತನ್ನ ಮನೆಗೆ ಕರೆದೊಯ್ದು ಅತ್ಯಾಚಾರವೆಸಗಿದ್ದ. ಅಲ್ಲದೆ ಆಕೆಯ ಮನೆಗೂ ಹೋಗಿ ಬಲವಂತವಾಗಿ ದೈಹಿಕ ಸಂಪರ್ಕ ನಡೆಸಿದ್ದ. ಬಳಿಕ ಯುವತಿ ಮದುವೆಯಾಗಲು ಕೇಳಿಕೊಂಡಾಗ ನಿರಾಕರಿಸಿದ್ದ. ಪರಸ್ಪರ ಜಾತಿ ಬೇರೆಯಾಗಿರುವುದರಿಂದ ತಂದೆ ಮತ್ತು ಬಾವ ಮದುವೆಗೆ ಒಪ್ಪುತ್ತಿಲ್ಲ ಎಂದು ಹೇಳಿದ್ದ ಸಂತ್ರಸ್ತ ಯುವತಿ ಬಳಿಕ ನಿತೇಶ್‌ನ ತಂದೆ ರಾಮಣ್ಣ ಪೂಜಾರಿ ಮತ್ತು ಬಾವ ನಿಖಿತಾಶ್ ಸುವರ್ಣ ಅವರ ಬಳಿ ಕೇಳಿಕೊಂಡಾಗ ಅವರು ಅವಾಚ್ಯವಾಗಿ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದರು ಎಂದು ಆರೋಪಿಸಿ ನೊಂದ ಯುವತಿ 2019ರಲ್ಲಿ ಪುತ್ತೂರು ಮಹಿಳಾ ಠಾಣೆಗೆ ದೂರು ನೀಡಿದ್ದರು. ಆಗಿನ ಇನ್ಸ್‌ಪೆಕ್ಟರ್ ತಿಮ್ಮಪ್ಪ ನಾಯಕ್ ಅವರು ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಈ ಪ್ರಕರಣದ ವಿಚಾರಣೆ ನಡೆಸಿದ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಕಾಂತರಾಜು ಎಸ್.ವಿ ಅವರು ಆರೋಪಿ ನಿತೇಶ್ ಮೇಲಿನ ಆರೋಪ ಸಾಬೀತಾಗಿದೆ ಎಂದು ತೀರ್ಮಾನಿಸಿ ಅಪರಾಧಿಗೆ ಭಾರತೀಯ ದಂಡ ಸಂಹಿತೆಯ ಕಲಂ 376 (2) (ಎನ್) ಅಡಿಯಲ್ಲಿ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು 10,000 ರೂ. ದಂಡ, ಕಲಂ 417ರ ಅಡಿಯಲ್ಲಿನ ಅಪರಾಧಕ್ಕೆ 1 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 5,000 ರೂ. ದಂಡ ವಿಧಿಸಿ ಆ.30ರಂದು ತೀರ್ಪು ನೀಡಿದ್ದಾರೆ.

ಯುವತಿಗೆ ಅವಾಚ್ಯವಾಗಿ ನಿಂದಿಸಿ, ಕೊಲೆ ಬೆದರಿಕೆಯೊಡ್ಡಿರುವ ಆರೋಪದಲ್ಲಿ ನಿತೇಶ್ ತಂದೆ ರಾಮಣ್ಣ ಪೂಜಾರಿ ಮತ್ತು ಬಾವ ನಿಖಿತಾಶ್ ಸುವರ್ಣರಿಗೆ ಭಾರತೀಯ ದಂಡ ಸಂಹಿತೆಯ ಕಲಂ 504ರಡಿ 1 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 5,000 ರೂ. ದಂಡ ಹಾಗೂ ಕಲಂ 506ರಡಿ 5 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 10,000 ರೂ. ದಂಡ ವಿಧಿಸಿ ಆದೇಶ ನೀಡಿದ್ದಾರೆ.

- Advertisement -

Related news

error: Content is protected !!