*ಮನೆಯಲ್ಲಿಯೇ ಗಣೇಶ ವಿಸರ್ಜನೆ ಮಾಡಿ
*ಸಾರ್ವಜನಿಕ ಬಕ್ರೀದ್ ಆಚರಣೆಗೂ ನಿರ್ಬಂಧ
ವರದಿ: ನ್ಯೂಸ್ ಡೆಸ್ಕ್, ವಿ ಟಿವಿ
ಬೆಂಗಳೂರು:ಕೊರೊನಾ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಅದ್ಧೂರಿ ಗಣೇಶೋತ್ಸವಕ್ಕೆ ಬಿಬಿಎಂಪಿ ಬ್ರೇಕ್ ಹಾಕಿದೆ. ಈ ಬಾರಿ ಸಾರ್ವಜನಿಕ ಗಣೇಶೋತ್ಸವ ನಡೆಸದಂತೆ ಬಿಬಿಎಂಪಿ ಕಮಿಷನರ್ ಮಂಜುನಾಥ್ ಪ್ರಸಾದ್ ಸೂಚನೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೊರೊನಾ ಭೀತಿ ಹಿನ್ನಲೆಯಲ್ಲಿ ಸರ್ಕಾರದ ಮಾರ್ಗಸೂಚಿ ಪ್ರಕಾರ, ಜನರು ಗುಂಪು ಗುಂಪಾಗಿ ಸೇರುವಂತಿಲ್ಲ. ಹೀಗಾಗಿ ಜನರು ಮನೆಯಲ್ಲಿಯೇ ಪರಿಸರ ಸ್ನೇಹಿ ಗಣೇಶನನ್ನು ಇಟ್ಟು ಪೂಜೆ ಮಾಡಬೇಕು. ಯಾವುದೇ ಕೆರೆಗಳಲ್ಲಿ ಗಣೇಶ ವಿಸರ್ಜನೆ ಮಾಡುವಂತಿಲ್ಲ. ಕಾನೂನು ಉಲ್ಲಂಘಿಸಿದ್ರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ರು.
ಇನ್ನು ಸಾರ್ವಜನಿಕ ಬಕ್ರೀದ್ ಆಚರಣೆಗೂ ಬಿಬಿಎಂಪಿ ನಿರ್ಬಂಧ ಹೇರಿದೆ. ಸಾರ್ವಜನಿಕ ಪ್ರಾಣಿ ಬಲಿ ನಿಷೇಧ ಮಾಡಲಾಗಿದೆ. ಹಬ್ಬದ ಹೆಸರಿನಲ್ಲಿ ಜನರು ಗುಂಪಾಗಿ ಸೇರುವಂತಿಲ್ಲ. ಸಾಮಾಜಿಕ ಅಂತರದಲ್ಲಿ ಪ್ರಾರ್ಥನೆ ಮಾಡಬಹುದು ಎಂದು ತಿಳಿಸಿದರು.