Thursday, May 2, 2024
spot_imgspot_img
spot_imgspot_img

ಗುರುವೆಂದೂ ಲಘುವಾಗದ ಅಭಯದಾತನು – ರಾಧಾಕೃಷ್ಣ ಎರುಂಬು

- Advertisement -G L Acharya panikkar
- Advertisement -

“ಗುರು ಚರಣಸ್ಪರ್ಶದಲಿ ಭಯಭಕ್ತಿ ಸೇವೆಯಲಿ ಇದೆ ವಿದ್ಯೆ ಸಂಪ್ರಾಪ್ತಿ, ವಿನಯ ಸಂಸ್ಕಾರ ಗುರು ಶಿಷ್ಯ ಸಂಬಂಧ ನದಿ ಕಡಲ ಅನುಬಂಧ: ಗುರು ದೇವನಭಯ ವರ ಮುದ್ದುರಾಮ “

ಹೀಗೆಂದು ಗುರುವನ್ನು ಅಭಯದಾತನು ಎನ್ನುತ್ತಾರೆ. ಗುರು ಎಂದೆಂದೂ ಪೂಜನೀಯ ಎಂಬ ಭಾವ ಶಿಷ್ಯನಲ್ಲಿ ಮೂಡುವಂತೆ ಹಿಂದಿನ ತಲೆಮಾರು ಹಾಕಿಕೊಟ್ಟ ಹಾದಿ. ಗುರುವಿನಲ್ಲಿಟ್ಟಿರುವ ಭಯಭಕ್ತಿ, ವಿಶ್ವಾಸ, ನಂಬಿಕೆ ಶಿಷ್ಯನ ಬೆಳವಣಿಗೆಯನ್ನು ವೇಗವಾಗಿಸುತ್ತದೆ.

ಗುರು ಎಂಬವನು ಜೀವ, ಜಗತ್ತು ಮತ್ತು ಈಶ್ವರ ತತ್ವಗಳ ತಿಳುವಳಿಕೆ ನೀಡಿ,ಅಜ್ಞಾನದ ಬಂಧನದಿಂದ ಮುಕ್ತನ್ನಾಗಿಸುವವ. ಅಲೌಕಿಕ ಬದುಕಿನ ಪರಿಚಯ ನೀಡುತಿದ್ದ ಗುರು , ಪ್ರಸ್ತುತ ಲೌಕಿಕ ಶಿಕ್ಷಣ ಕೊಡುವ ಶಿಕ್ಷಕನಾಗಿದ್ದಾನೆ ಎಂದರೆ ತಪ್ಪಿಲ್ಲ. ತನ್ನ ಹೊಟ್ಟೆಪ್ಪಾಡಿಗೆ ಯಾವುದೂ ಸಿಗದೆ ಅನಿವಾರ್ಯವಾಗಿ ಗುರುವಾಗಿದ್ದುಕೊಳ್ಳಬೇಕಾದವನು ಶಿಷ್ಯನ ವಿಶ್ವಾಸ ನಂಬಿಕೆಗೆ ಹೇಗೆ ಪಾತ್ರನಾದಾನು? ಶಿಷ್ಯನೂ ಅನಿವಾರ್ಯವಾಗಿ ಅಪರಿಚಿತನೋರ್ವನ ಶಿಷ್ಯತ್ವ ಸ್ವೀಕಾರ ಮಾಡಿಕೊಳ್ಳಬೇಕಾದ ಸ್ಥಿತಿ ಗತಿಯಾಗಿಬಿಟ್ಟಿದೆ.

ಸ್ತುತಿಕಾರ “ಗುರು ಬ್ರಹ್ಮ, ಗುರುವಿಷ್ಣು, ಗುರುದೇವೋ ಮಹೇಶ್ವರನೆಂದ. ಅಂದರೆ ಶಿಲೆಯಂತಿದ್ದ ಜೀವಿಗೆ ಸಂಸ್ಕಾರ-ಜ್ಞಾನದ ಹುಟ್ಟು ಕೊಟ್ಟ. ಬದುಕು ಕಲಿಸಿಕೊಟ್ಟು ಪಾಲಕನಾದ, ಮತ್ತೆ ಮೋಕ್ಷದ ನಂತರ ಧರ್ಮ-ಅಧರ್ಮದ ಪ್ರತಿಫಲದ ಬೆಳಕ ಚೆಲ್ಲಿದ, ಅಂದರೆ ಜೀವದೊಳಕ್ಕೆ ಜೀವತ್ವ ತುಂಬಿ ಶಿಲೆಯನ್ನು ವಿಗ್ರಹವಾಗಿಸುವ ಪರಬ್ರಹ್ಮಸಮನಾಗುತ್ತಾನೆ.

ಪುರಾಣ “ವೇದವ್ಯಾಸ”ರನ್ನು ಗುರುವೆಂದು ಬಿಂಬಿಸಿದೆ ಯಾಕೆಂದರೆ ಬದುಕಿನ ಸರ್ವವನ್ನೂ ಮಹಾಭಾರತ ಕಾವ್ಯದಲ್ಲಿ ಹುದುಗಿಸಿದ ಶ್ರೇಷ್ಠರು. ಗುರು ದತ್ತಾತ್ರೇಯರು, ಗುರು ನಿತ್ಯಾನಂದರು ಗುರು ರಾಘವೇಂದ್ರಸ್ವಾಮಿಗಳು ಸುಖ ದುಃಖಗಳಿಗೆ ಆದ್ಯಾತ್ಮದ ಬೆಳಕು ಚೆಲ್ಲಿದವರು. ಜ್ಯೋತಿಷ್ಯಕ್ಕೆ ಗುರುಬ್ರಹಸ್ಪತಿಗಳು, ಗುರು ಮಧ್ವರು ಮೂಲ ಗುರುಗಳಾದರು. ಇಲ್ಲೆಲ್ಲಾ ಪವಿತ್ರ ಶರಣಾಗತಿ ಭಾವವಿದೆ.

“ಒಂದಕ್ಷರ ಕಲಿಸಿದೊಡೆ ಗುರು” ಎಂಬ ಲಘು ಮಾತು, ಅತಿ ನಿಯಮವಿರುವ ಶಾಲೆಗಳೆಂಬ ಉದ್ದಿಮೆ ಗುರುವಿಗೆ ಯೋಗ್ಯ ಶಿಲೆ ಯಾವುದೆಂಬ ಆಯ್ಕೆಗೂ ಅವಕಾಶ ನೀಡದೆ ಶಿಷ್ಯನಿಗೂ ಗುರುವನ್ನು ಆಯ್ಕೆ ಮಾಡುವ ಅವಕಾಶವನ್ನು ಇಲ್ಲವಾಗಿಸಿದೆ. ಶಿಷ್ಯ ಸ್ವಭಾವವನ್ನು ಅರಿತು ಶಿಕ್ಷಣ ನೀಡಬೇಕಾದ ಕಾಲವಿದಲ್ಲದೆ ಯೋಗ್ಯ ಗುರು ಯಾ ಶಿಷ್ಯರನ್ನು ಆಯ್ದುಕೊಳ್ಳುವ ಕಾಲವಿಲ್ಲ.
ಕೆಲವೊಮ್ಮೆ ದ್ರೋಣನಂತೆ ತನ್ನ ವಿರೋಧ ಮತ್ತು ಆಸೆ ಎಂಬ ಸ್ವಾರ್ಥಕ್ಕೆ ಬಲಿಯಾಗಿ ಶಿಷ್ಯರನ್ನು ಹುಡುಕಿ ಸೇರಿಕೊಳ್ಳಬೇಕಾದ್ದು ಇದೆ. ಗುರುವಾದವನಿಗೆ ಆಸೆ, ಸ್ವಾರ್ಥ, ಹಣದಾಹ,ಮೊದಲಾದ ವಚನ ಬದ್ಧತೆ ಅತಿ ಕಡಿಮೆ ಇದ್ದರೆ ಒಳಿತು.


ಗುರುಕುಲ, ಆಶ್ರಮವೆಂಬ ಸಮಗ್ರ ಶಿಕ್ಷಣ ಬದುಕಿಗೆ ನೀಡು ಪಾಠ ನಿಂತೇ ಬಿಟ್ಟಿದೆ. ಪ್ರಸ್ತುತ ಕೊಡು-ಕೊಳ್ಳುವಿಕೆಯ ವಾಣಿಜ್ಯತೆ ಗುರು ಶಿಷ್ಯ ಪವಿತ್ರ ಸಂಬಂಧಕ್ಕೆ ಕೊಲ್ಲಿ ಇಟ್ಟಿದೆ. ಸರಿಯಾದುದನ್ನು ತಿಳಿಹೇಳುತ್ತಿದ್ದಾರೆಯೇ ಗುರುಗಳು ಎಂಬಲ್ಲೇ ಶಿಷ್ಯನಿಗೆ ಸಂಶಯ ಹುಟ್ಟುತಿದೆ, ಏನಿದ್ದರೂ ಕೊಟ್ಟ ಶುಲ್ಕಕ್ಕೆ ನೀಡುವ ಪ್ರತಿಫಲವೆಂಬ ನಂಬಿಕೆ ಅಗಣಿತ ಗುರುವಿಶ್ವಾಸವನ್ನು ಕಸಿದುಕೊಂಡಿದೆ. ಇತರ ತಿಳುವಳಿಕೆ ಕೊಡುವ ಮಾಹಿತಿ ತಂತ್ರಜ್ಞಾನ ಗುರುವಿನ ತಿಳುವಳಿಕೆಯ ಮೇಲೆ ಆವಿಶ್ವಾಸ ಮೂಡುವಂತೆ ಮಾಡುತ್ತಿರುವುದೂ ಶಿಷ್ಯನ ಗುರುಭಕ್ತಿಗೆ ಚ್ಯುತಿಯಾಗಿದೆ.ಕಲಿತು ಹೊರಬಂದ ಶಿಷ್ಯ ಗುರುವಿನ ಮೇಲೆ ಸೇಡು ತೀರಿಸುವ ಹುನ್ನಾರದ ವರೆಗೂ ಜಗತ್ತು ಕಾಲಿಟ್ಟಿದೆ.

ಕಾಲ,ಜಗತ್ತು ಹೇಗೆ ಇರಲಿ ಗುರುವು ಶಿಲೆಯಂತಿರುವ ಯಾವುದೇ ಶಿಷ್ಯನನ್ನು ಸುಂದರ ವಿಗ್ರಹವಾಗಿಸುವ ಪ್ರಧಾನ ಕಾರ್ಯವನ್ನೆಸಗಬೇಕು. ಶಿಕ್ಷೆಯೇ ದಾರಿಯಲ್ಲ ಪ್ರೀತಿ, ನಂಬಿಕೆಯಿಂದ ವಿಶ್ವಾಸಗಳಿಸಿಕೊಳ್ಳಬೇಕು. ಇಲ್ಲವಾದರೆ ಗುರುತ್ವ ಎಂಬ ಅಸ್ತಿತ್ವವನ್ನು ತ್ಯಜಿಸಬಹುದು.

ಕೊನೆಯಲ್ಲಿಷ್ಟೇ ಹೇಳಹೊರಟಿರುವುದು “ಒಳ್ಳೆಯ ಗುರು ಲಭಿಸಿದರೆ ಬದುಕು ಧನ್ಯ” ಒಳ್ಳೆಯ ವ್ಯಕ್ತಿತ್ವ ರೂಪುಗೊಳ್ಳಬೇಕಾದ ವ್ಯಕ್ತಿಯ ಹಾದಿಯಲ್ಲಿ ಗುರು ಒಬ್ಬ ಊರುಗೋಲಾಗಬೇಕೇ ಹೊರತು ಗುರುವಿನ ಅಜ್ಞಾನ ಶಿಷ್ಯನಿಗೆ ಮಾರಕವಾಗದಂತೆ ಎಚ್ಚರವಿರಲಿ. ಗುರು-ಶಿಷ್ಯ ಪರಂಪರೆ ಪವಿತ್ರತೆಯಿಂದಲೇ ಸಾಗಲಿ. ಅಪಾರ ಗುರುಗಢಣಕ್ಕೆ ಶುಭಾಶಯವಿರಲಿ. “ನಡೆದುಬಿಡಲಿ ಉತ್ತಮ ಗುರುಶಿಷ್ಯರ ಸಂಗಮ, ಅಳಿಯಲಿ ಎಲ್ಲರೆದೆಯ ತಮ”.

?️ರಾಧಾಕೃಷ್ಣ ಎರುಂಬು

- Advertisement -

Related news

error: Content is protected !!