ಹೊಸನಗರ: ಮನೆಯವರ ವಿರೋಧದ ನಡುವೆಯೂ ಇಷ್ಟಪಟ್ಟು ಪ್ರೀತಿಸಿದ ಹುಡುಗನೊಂದಿಗೆ ದಾಪಂತ್ಯ ಜೀವನಕ್ಕೆ ಕಾಲಿಟ್ಟ ಯುವತಿ, ಒಂದು ವರ್ಷ ತುಂಬುವ ಮುನ್ನವೇ ದುರಂತ ಅಂತ್ಯ ಕಂಡಿದ್ದಾಳೆ.

ಮೃತ ಯುವತಿ ತಾಲೂಕಿನ ಕರಿಮನೆ ಗ್ರಾಪಂ ವ್ಯಾಪ್ತಿಯ ಕಾಡಿಗ್ಗೇರಿ ಉಮೇಶ್ ಪತ್ನಿ ಸೌಂದರ್ಯಾ(21) ಎಂದು ಗುರುತಿಸಲಾಗಿದೆ.

ಹಾಸನ ಜಿಲ್ಲೆ ಸಕಲೇಶಪುರ ತಾಲೂಕು ಬೆಳಗೋಡು ಸಮೀಪದ ಗೋಳಗೊಂಡೆ ಗ್ರಾಮದ ಯುವತಿ ಸೌಂದರ್ಯಾ ಅವರಿಗೆ ಕಾಡಿಗ್ಗೇರಿ ಉಮೇಶ್ ನಡುವೆ ಫೇಸ್ಬುಕ್ನಿಂದ ಗೆಳೆತನ ಶುರುವಾಗಿ ಕ್ರಮೇಣ ಪ್ರೀತಿಯಾಗಿತ್ತು, ಮನೆಯವರ ವಿರೋಧದ ನಡುವೆ ಮದುವೆಯಾಯಿತು. ಇವರಿಬ್ಬರ ಜಾತಿ ಬೇರೆ ಎಂಬ ಕಾರಣ ಮನೆಯಲ್ಲಿ ಮದುವೆಗೆ ಒಪ್ಪಿಗೆ ಇರಲಿಲ್ಲ. ವಿರೋಧದ ನಡುವೆಯೂ ಇವರಿಬ್ಬರೂ 2020ರ ನವೆಂಬರ್ನಲ್ಲಿ ವಿವಾಹವಾಗಿದ್ದರು. 15 ದಿನದ ಹಿಂದೆ ಸೌಂದರ್ಯಳ ತಂಗಿ ಐಶ್ವರ್ಯಾ ಮೃತಪಟ್ಟಾಗ ಶವಸಂಸ್ಕಾರದ ವೇಳೆ ಉಮೇಶ್ನೊಂದಿಗೆ ಹೋಗಿದ್ದಳು. ಜೂ.25ರಂದು ಸೌಂದರ್ಯ ಮೃತದೇಹ ಇವಳ ಗಂಡನ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಅನುಮಾನಾಸ್ಪದವಾಗಿ ಪತ್ತೆಯಾಗಿದೆ.

ಮಗಳ ಸಾವಿನಿಂದ ಆಕ್ರೋಶಗೊಂಡ ಆಕೆಯ ಪಾಲಕರು ಉಮೇಶನ ಮನೆಯ ಹತ್ತಿರವೇ ಅಂತ್ಯಕ್ರಿಯೆ ನಡೆಸಲು ಮುಂದಾಗಿದ್ದರು. ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಯಿತು. ತೀರ್ಥಹಳ್ಳಿ ಡಿಎಸ್ಪಿ ಇ. ಶಾಂತವೀರ್ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು. ಮಗಳ ಸಾವಿಗೆ ಅಳಿಯ ಉಮೇಶ್, ಆತನ ತಂದೆ ಪಾಂಡುರಂಗ, ತಾಯಿ ಶಾಂತಮ್ಮ, ಸಹೋದರಿ ರೂಪಾ ಕಾರಣ. ಬೇರೆ ಜಾತಿ ಎಂಬ ಕಾರಣಕ್ಕೆ ನನ್ನ ಮಗಳಿಗೆ ಹಿಂಸೆ ನೀಡಿದ್ದಾರೆ. ಅಲ್ಲದೆ ಉಮೇಶನಿಗೆ ಬೇರೊಂದು ಮದುವೆ ಮಾಡಲು ಯೋಜನೆ ಮಾಡಿದ್ದರು ಎಂದು ಮೃತಳ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ.


