Friday, May 3, 2024
spot_imgspot_img
spot_imgspot_img

ಬಿ.ಸಿ.ರೋಡ್ ನಲ್ಲಿ ಹೆಚ್ಚಾದ ಕಳವು ಕೃತ್ಯಗಳು: ಹಾಡಹಗಲೇ ಮಹಿಳೆಯ ಕೊರಳಿಂದ ಸರ ಸೆಳೆದು ಪರಾರಿಯಾದ ದುಷ್ಕರ್ಮಿಗಳು

- Advertisement -G L Acharya panikkar
- Advertisement -

ಬಂಟ್ವಾಳ: ಹಗಲು ಹೊತ್ತಿನಲ್ಲಿ ಅಂಗಡಿಯೊಂದರಲ್ಲಿ ಮಹಿಳೆಯೋರ್ವಳ ಕುತ್ತಿಗೆಗೆ ಕೈ ಹಾಕಿ ಅಪರಿಚಿತ ವ್ಯಕ್ತಿಗಳಿಬ್ಬರು ಬಂಗಾರದ ಚೈನ್ ಎಳೆದು ಪರಾರಿಯಾದ ಘಟನೆ ಬಂಟ್ವಾಳ ನಗರ ಪೋಲೀಸ್ ಠಾಣಾ ವ್ಯಾಪ್ತಿಯ ಅಜ್ಜಿಬೆಟ್ಟು ಎಂಬಲ್ಲಿ ಇಂದು ಮಧ್ಯಾಹ್ನ ನಡೆದಿದೆ.

ಬಿ.ಸಿರೋಡಿನ ಬಿ.ಮೂಡ ಗ್ರಾಮದ ಅಜ್ಜಿಬೆಟ್ಟು ಶಾಲಾ ಮೈದಾನದ ಬಳಿ ಇರುವ ಮಹಾಲಕ್ಷ್ಮಿ ಸ್ಟೋರ್ ಮಾಲಕಿ ಸರೋಜಿನಿ ಅವರ ಕುತ್ತಿಗೆಯಿಂದ ಇಬ್ಬರು ಕಳ್ಳರು ಬಂಗಾರದ ಚೈನ್ ಎಗರಿಸಿ ಪರಾರಿಯಾಗಿರುವುದು. ಸುಮಾರು 75 ಸಾವಿರ ಮೌಲ್ಯದ 1.50 ಪವನ್ ಚಿನ್ನದ ಸರ ಕಳವಾಗಿದೆ.

ಮಧ್ಯಾಹ್ನ ಸುಮಾರು 2.45 ಗಂಟೆಗೆ ಕಳ್ಳತನ ನಡೆದಿದ್ದು, ಕಳವು ಮಾಡಿದ ಇಬ್ಬರು ವ್ಯಕ್ತಿಗಳು ಹೆಲ್ಮೆಟ್ ಧರಿಸಿದ್ದರು ಎಂದು ಅವರು ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಮಹಾಲಕ್ಷ್ಮಿ ಸ್ಟೋರ್ ಮಾಲಕಿ ಸರೋಜಿನಿ ಅವರು ಇತ್ತೀಚೆಗೆ ಅಂಗಡಿಯನ್ನು ನವೀನ್ ಕುಲಾಲ್ ಎನ್ನುವವರಿಗೆ ಬಾಡಿಗೆಗೆ ನೀಡಿದ್ದರು.
ನವೀನ್ ಕುಲಾಲ್ ಅವರು ಮಧ್ಯಾಹ್ನ ಊಟಕ್ಕೆ ಮನೆಗೆ ತೆರಳುವ ಸಂದರ್ಭದಲ್ಲಿ ಅಂಗಡಿಯಲ್ಲಿ ಮಾಲಕಿ ಸರೋಜಿನಿ ಅವರು ಕುಳಿತು ಕೊಂಡು ವ್ಯಾಪಾರವನ್ನು ನೋಡಿಕೊಳ್ಳುತ್ತಾರೆ. ಅದೇ ರೀತಿ ಇಂದು ಕೂಡ ನವೀನ್ ಊಟಕ್ಕೆ ತೆರಳಿದಾಗ ಸರೋಜಿನಿ ಅಂಗಡಿಯಲ್ಲಿದ್ದರು. ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿ ಗಳು ಹೆಲ್ಮೆಟ್ ಧರಿಸಿಕೊಂಡಿದ್ದರು, ಅದರಲ್ಲಿ ಹಿಂಬದಿ ಸವಾರ ಅಂಗಡಿಗೆ ಬಂದು ವಿಮಲ್ ಹಾಗೂ ಚಾಕಲೇಟ್ ಪಡೆದುಕೊಂಡು, ಚಿಲ್ಲರೆ ನೀಡುವ ಉದ್ದೇಶದಿಂದ ಕ್ಯಾಶ್‌ ಕೌಂಟರ್ ಗೆ ಬಗ್ಗಿದಾಗ ನಿಂತುಕೊಂಡಿದ್ದ ಅಪರಿಚಿತ ವ್ಯಕ್ತಿ ಸರೋಜಿನಿ ಅವರ ಕುತ್ತಿಗೆಯಲ್ಲಿದ್ದ ಬಂಗಾರ ಚೈನ್ ಎಳೆದುಕೊಂಡು ಬೈಕಿನಲ್ಲಿ ಕುಳಿತು ಪರಾರಿಯಾಗಿದ್ದಾರೆ ಎಂದು ನಗರ ಪೋಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಶನಿವಾರವಷ್ಟೇ ಕೈಕಂಬದಲ್ಲಿ 12 ಅಂಗಡಿಗಳಲ್ಲಿ ಸರಣಿ ಕಳವು ಪ್ರಕರಣಗಳು ನಡೆದಿದ್ದು, ಇದೀಗ ಕೃತ್ಯ ನಡೆದು ನಾಲ್ಕು ದಿನಗಳಲ್ಲಿ ಮತ್ತೊಂದು ಪ್ರಕರಣ ಅದೂ ಹಾಡಹಗಲೇ ರಾಜಾರೋಷವಾಗಿ ನಡೆಯುತ್ತಿರುವುದು ವ್ಯಾಪಾರಿಗಳನ್ನು ಹಾಗೂ ಸಾರ್ವಜನಿಕರನ್ನು ಆತಂಕಕ್ಕೀಡುಮಾಡಿದೆ. ನಿಲ್ಲಿಸಿದ್ದ ವಾಹನಗಳ ಕಳವು ಸಹಿತ ಹಲವು ಕಳವು ಕೃತ್ಯಗಳು ಬಿ.ಸಿ.ರೋಡ್ ಪರಿಸರದಲ್ಲಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅಪರಾಧಿಗಳನ್ನು ಸೆರೆಹಿಡಿಯುವ ಉದ್ದೇಶದಿಂದ ಹಾಕಲಾಗಿರುವ ಸಿಸಿ ಕ್ಯಾಮರಾಗಳನ್ನು ಸುಸ್ಥಿತಿಯಲ್ಲಿರಿಸಿ, ಇಡೀ ಬಿ.ಸಿ.ರೋಡ್ ಪೇಟೆಯನ್ನು ಕ್ಯಾಮರಾ ಕಣ್ಯಾವಲಿನಲ್ಲಿ ಇರಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಘಟನೆಯ ಬಳಿಕ ಪೊಲೀಸರು ತೀವ್ರ ಶೋಧ ಕಾರ್ಯ ನಡೆದಿದ್ದು, ನಾನಾ ಆಯಾಮಗಳಲ್ಲಿ ತಪಾಸಣೆಗಳನ್ನು ನಡೆಸುತ್ತಿದ್ದಾರೆ.

- Advertisement -

Related news

error: Content is protected !!