ಮಹಾಮಾರಿ ಕೊರೊನಾ ವೈರಸ್ ಮರಣಮೃದಂಗ ಬಾರಿಸುತ್ತಲೇ ಇದೆ. ಅತೀ ಹೆಚ್ಚು ಕೊರೊನಾ ಸೋಂಕಿತರನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. ಈ ನಡುವೆ ಆರೋಗ್ಯ ಸಚಿವಾಲಯ ಮತ್ತೊಂದು ಆಘಾತಕಾರಿ ಸುದ್ದಿಯೊಂದನ್ನು ನೀಡಿದೆ. ಅದೇನೆಂದರೆ ಕೊರೊನಾ ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಭಾರತ 8ನೇ ಸ್ಥಾನದಲ್ಲಿದೆ.ಆರೋಗ್ಯ ಸಚಿವಾಲಯ ನೀಡಿದ ಮಾಹಿತಿ ಪ್ರಕಾರ, ಜೂನ್ 30ರವರೆಗೆ ಭಾರತದಲ್ಲಿ ಕೊರೊನಾ ಸೋಂಕಿಗೆ 16,893 ಮಂದಿ ಬಲಿಯಾಗಿದ್ದಾರೆ. ಆದರೆ ಜುಲೈ 6ರ ವೇಳೆಗೆ ಈ ಸಂಖ್ಯೆ ಜಾಸ್ತಿಯಾಗಿದ್ದು, ಸಾವಿನ ಸಂಖ್ಯೆ 19,693ಕ್ಕೆ ಏರಿಕೆಯಾಗಿದೆ.
ಜುಲೈ 5ರಂದು ಅತೀ ಹೆಚ್ಚು ಸಾವು..!
ಭಾರತದಲ್ಲಿ ಸಾವಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಅವಧಿಯಲ್ಲಿ ಜಾಗತಿಕವಾಗಿ ಕೊರೊನಾ ಸೋಂಕಿತರ ಮರಣ ಪ್ರಮಾಣ ಶೇ.0.9ರಷ್ಟಿದ್ದರೆ, ಭಾರತದಲ್ಲಿ ಶೇ.2.6ರಷ್ಟಿದೆ. ಅದರಲ್ಲಿ ಜುಲೈ 5ರಂದು ಭಾರತದಲ್ಲಿ ದಾಖಲೆ ಪ್ರಮಾಣದಲ್ಲಿ ಸಾವು ಸಂಭವಿಸಿದ್ದು, ಕೊರೊನಾ ಆರ್ಭಟಕ್ಕೆ 613 ಮಂದಿ ಬಲಿಯಾಗಿದ್ದಾರೆ. ಇನ್ನು ಭಾರತವನ್ನು ಹೊರತುಪಡಿಸಿದರೆ ಮೆಕ್ಸಿಕೋದಲ್ಲಿ ಸಾವಿನ ಪ್ರಮಾಣ ಶೇ.2.1, ರಷ್ಯಾದಲ್ಲಿ ಶೇ.1.7, ಇರಾನ್ ನಲ್ಲಿ ಶೇ.1.4ರಷ್ಟು ಮರಣ ಪ್ರಮಾಣ ಏರಿಕೆಯಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.
ಕರ್ನಾಟಕದಲ್ಲೂ ಸಾವಿನ ಪ್ರಮಾಣ ಏರಿಕೆ..!
ಮತ್ತೊಂದುಕಡೆ ದೇಶದ 8 ರಾಜ್ಯದಲ್ಲಿ ಸಾವಿನ ಪ್ರಮಾಣ ಜಾಸ್ತಿಯಾಗುತ್ತಿದೆ. ಇದರಲ್ಲಿ ಕರ್ನಾಟಕದಲ್ಲೂ ಸಾವಿನ ಪ್ರಮಾಣ ಏರಿಕೆಯಾಗುತ್ತಿದೆ ಎಂದು ದತ್ತಾಂಶ ತಿಳಿಸಿದೆ. ಕಳೆದ ಒಂದು ವಾರದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದು, ಸದ್ಯ ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ 401 ಮಂದಿ ಸಾವನ್ನಪ್ಪಿದ್ದಾರೆ.
ವರದಿ: ನ್ಯೂಸ್ ಡೆಸ್ಕ್, ವಿ ಟಿವಿ