ವರದಿ: ನ್ಯೂಸ್ ಡೆಸ್ಕ್, ವಿ ಟಿವಿ
ಜೈಪುರ: ರಾಜಸ್ಥಾನ ಸರ್ಕಾರದಲ್ಲಿ ಬಂಡಾಯದ ಬಿಸಿ ಜೋರಾಗಿದೆ. ಸೋಮವಾರ ಸಿಎಂ ಅಶೋಕ್ ಗೆಹ್ಲೋಟ್ 102 ಶಾಸಕರ ಬಲಯಿದೆ ಎಂದು ಶಕ್ತಿ ಪ್ರದರ್ಶನ ಮಾಡಿದ ಬಳಿಕ ಡಿಸಿಎಂ ಸಚಿನ್ ಪೈಲಟ್ ಸಿಎಂಗೆ ಮತ್ತೆ ಟಕ್ಕರ್ ಕೊಟ್ಟಿದ್ದಾರೆ. ಸುಮಾರು 15 ಶಾಸಕರು ಒಟ್ಟಾಗಿ ಕುಳಿತುಕೊಂಡಿರುವ ವಿಡಿಯೋ ರಿಲೀಸ್ ಮಾಡಿದ್ದಾರೆ.
ಆದರೆ ಈ ವಿಡಿಯೋದಲ್ಲಿ ಡಿಸಿಎಂ ಸಚಿನ್ ಪೈಲಟ್ ಇಲ್ಲ. ಇದಕ್ಕೂ ಮೊದಲು ನನಗೆ 30 ಕಾಂಗ್ರೆಸ್ ಶಾಸಕರ ಬೆಂಬಲವಿದೆ ಎಂದು ಡಿಸಿಎಂ ಪೈಲಟ್ ಹೇಳಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಈ ವಿಡಿಯೋ ರಿಲೀಸ್ ಮಾಡಿದ್ದು, ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಕೆರಳಿಸಿದೆ.
ಇಂದು ಮತ್ತೊಂದು ಸುತ್ತಿನ ಸಭೆ:
ಇಂದು ಮತ್ತೊಮ್ಮೆ ಕಾಂಗ್ರೆಸ್ ಶಾಸಕಾಂಗ ಸಭೆ ಕರೆದಿದೆ. ನಿನ್ನೆ ನಡೆದ ಸಿಎಲ್ ಪಿ ಸಭೆಯಲ್ಲಿ 102 ಶಾಸಕರು ಭಾಗಿಯಾಗಿದ್ದು, ಸಿಎಂ ಅಶೋಕ್ ಗೆಹ್ಲೋಟ್ ಶಕ್ತಿ ಪ್ರದರ್ಶನ ಮಾಡಿದ್ದರು. ಆದರೆ ಡಿಸಿಎಂ ಸಚಿನ್ ಪೈಲಟ್ ಹಾಜರಾಗಿರಲಿಲ್ಲ. ಆದರೆ ಇಂದು ಬೆಳಿಗ್ಗೆ 10.30ಕ್ಕೆ ಕಾಂಗ್ರೆಸ್ ಮತ್ತೊಂದು ಸುತ್ತಿನ ಸಭೆ ಕರೆದಿದ್ದು, ಸಚಿನ್ ಪೈಲಟ್ ಗೂ ಆಹ್ವಾನಿಸಲಾಗಿದೆ.