




ನವದೆಹಲಿ: ಭಯೋತ್ಪಾದನೆ ವಿಚಾರದಲ್ಲಿ ಕಾಂಗ್ರೆಸ್ ಸಹ ಪಾಕಿಸ್ತಾನದ ರೀತಿಯೇ ಮಾತನಾಡುತ್ತಿದೆ ಎಂದು ಕೇಂದ್ರ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ ಆರೋಪಿಸಿದ್ದಾರೆ. ಪಹಲ್ಗಾಮ್ ಭಯೋತ್ಪಾದನಾ ದಾಳಿ ಕುರಿತು ಕಾಂಗ್ರೆಸ್ ನಾಯಕರ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಇಬ್ಬಗೆ ನೀತಿ ಪ್ರದಶಿಸುತ್ತಿದೆ ಎಂದು ದೂರಿದ ಅವರು, ಬಹುತೇಕ ಸಂದರ್ಭಗಳಲ್ಲಿ ಕಾಂಗ್ರೆಸ್ ಪಾಕಿಸ್ತಾನದಂತೆಯೇ ಮಾತನಾಡುತ್ತದೆ ಎಂಬುದು ಸ್ಪಷ್ಟವಾಗಿದೆ. ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿ ರದ್ದುಪಡಿಸುವಾಗಲೂ ಕಾಂಗ್ರೆಸ್ ನಾಯಕರು ʼಕರಾಳ ದಿನʼ ಎಂದು ಪಾಕಿಸ್ತಾನದ ರೀತಿಯೇ ನಿಲುವು ವ್ಯಕ್ತಪಡಿಸಿದ್ದರು ಎಂದು ಜೋಶಿ ಹರಿಹಾಯ್ದರು.
ಈಗ ಕಾಶ್ಮೀರದ ಪ್ರವಾಸಿ ತಾಣ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ಅಮಾನುಷ ಕೃತ್ಯ ನಡೆಸಿದ್ದರೂ ಕಾಂಗ್ರೆಸ್ ಪಕ್ಷ ಪಾಕಿಸ್ತಾನದಂತೆಯೇ ಮಾತನಾಡುತ್ತಿದೆ. ಕೆಲವರು ಈ ದಾಳಿಗೆ ಹಿಂದುತ್ವವೇ ಕಾರಣ ಎಂದು ಸಾರ್ವಜನಿಕವಾಗಿ ದೂಷಿಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರ ಹೇಳಿಕೆಗಳ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.