


ಕಡಬ: ಹಾಸನ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ನೆಲ್ಯಾಡಿ ಐಟಿಐ ಕಾಲೇಜು ಮುಂಭಾಗ ಟ್ಯಾಂಕರ್ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸಹಪ್ರಯಾಣಿಕನೋರ್ವ ಮೃತಪಟ್ಟು, ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ ಅ.22ರಂದು ನಡೆದಿದೆ.
ನೆಲ್ಯಾಡಿ ನಿವಾಸಿ ವಿ.ಜೆ.ಜೋಸೆಫ್ (55) ನೀಡಿದ ದೂರಿನಂತೆ, ಹಾಸನ ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಕೆಎ-22-ಎಂಎ-5270 ನಂಬರಿನ ಕಾರು, ರಸ್ತೆ ಬದಿ ನಿಂತಿದ್ದ ಟಿಎನ್-88-ಎ-9477 ನಂಬರಿನ ಟ್ಯಾಂಕರ್ ಲಾರಿಯ ಹಿಂಬದಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ.

ಗಾಯಗೊಂಡ ಇಬ್ಬರನ್ನು ಸ್ಥಳೀಯರ ಸಹಾಯದಿಂದ ನೆಲ್ಯಾಡಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಸಹಪ್ರಯಾಣಿಕ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. ಚಾಲಕನಿಗೆ ಆಸ್ಪತ್ರೆಯಲ್ಲಿ ಒಳರೋಗಿಯನ್ನಾಗಿ ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ.
ಈ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ: 138/2026, ಕಲಂ 281, 106 BNS-2023 ರಂತೆ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.








