
ಹಲ್ಲುಗಳಿಗೆ ಕ್ಲಿಪ್ ಹಾಕಿಸಿಕೊಳ್ಳಲೆಂದು ಆಸ್ಪತ್ರೆಗೆ ತೆರಳಿದ ಯುವಕನೊಬ್ಬ ದಾರುಣವಾಗಿ ಮೃತಪಟ್ಟ ಘಟನೆ ಕಲಬುರಗಿ ನಗರದಲ್ಲಿ ಸಂಭವಿಸಿದೆ.
ಕಲಬುರಗಿಯ ಆನಂದ ನಗರದ ನಿವಾಸಿ ಶಶಾಂಕ್(18) ಮೃತ ದುರ್ದೈವಿ.
3 ದಿನಗಳ ಹಿಂದೆ ಹಲ್ಲುಗಳಿಗೆ ಕ್ಲಿಪ್ ಹಾಕಿಸಿಕೊಳ್ಳಲು ನಗರದ ಖಾಸಗಿ ಆಸ್ಪತ್ರೆಗೆ ಶಶಾಂಕ್ ಬಂದಿದ್ದ. ಚಿಕಿತ್ಸೆ ವೇಳೆ ವೈದ್ಯರು ಯುವಕನಿಗೆ ಅನಸ್ತೇಶಿಯಾ ನೀಡಿದ್ದರು. ಕೆಲವೇ ನಿಮಿಷದಲ್ಲಿ ಪ್ರಜ್ಞೆತಪ್ಪಿದ ಯುವಕ ಕೋಮಾಗೆ ಜಾರಿದ್ದ. ಮೂರು ದಿನವಾದರೂ ಪ್ರಜ್ಞೆ ಬರಲೇ ಇಲ್ಲ. ಸೋಮವಾರ ರಾತ್ರಿ ಕೊನೆಯುಸಿರೆಳೆದಿದ್ದಾನೆ.

ವೈದ್ಯರ ನಿರ್ಲಕ್ಷ್ಯದಿಂದಲೇ ಶಶಾಂಕ್ ಮೃತಪಟ್ಟಿದ್ದಾನೆ ಎಂದು ಆರೋಪಿಸಿ ಆಸ್ಪತ್ರೆ ಮುಂದೆ ಮೃತನ ಸಂಬಂಧಿಕರು ಮತ್ತು ಸ್ನೇಹಿತರು ಪ್ರತಿಭಟನೆ ನಡೆಸಿದರು. ಮೃತನ ಕುಟುಂಬಕ್ಕೆ ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿದ ಸ್ಥಳಕ್ಕೆ ಬಂದ ಸ್ಟೇಷನ್ ಬಜಾರ್ ಠಾಣೆ ಪೊಲೀಸರು, ಪ್ರತಿಭಟನಾಕಾರರ ಮನವೊಲಿಸಿದರು. ವೈದ್ಯರ ನಿರ್ಲಕ್ಷ್ಯದಿಂದಲೇ ಯುವಕನ ಸಾವಾಗಿದ್ದರೆ ತಕ್ಕ ಶಿಕ್ಷೆ ಆಗಲಿದೆ ಎಂದು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದರು.
ಸ್ಟೇಷನ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವರದಿ ಬಂದ ಬಳಿಕ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಹೇಳಲಾಗಿದೆ.


