Saturday, April 27, 2024
spot_imgspot_img
spot_imgspot_img

ಪುತ್ತೂರು ಪತ್ರಿಕಾ ಭವನದಲ್ಲಿ ಎಲ್ಲಾ ಮಾಧ್ಯಮದವರಿಗೂ ಅವಕಾಶ ನೀಡಿ-ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪುತ್ತೂರು ಸಮಿತಿಯ ಮನವಿಗೆ ಜಿಲ್ಲಾಧಿಕಾರಿಯವರಿಂದ ಸಕರಾತ್ಮಕ ಸ್ಪಂದನೆ

- Advertisement -G L Acharya panikkar
- Advertisement -

ಪುತ್ತೂರು: ಪುತ್ತೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪತ್ರಿಕಾ ಭವನದಲ್ಲಿ ಭಾಗವಹಿಸಲು ತಾಲೂಕಿನ ಎಲ್ಲಾ ಪತ್ರಕರ್ತರ ಸಂಘಟನೆಗಳಿಗೆ ಮತ್ತು ಎಲ್ಲಾ ಮಾಧ್ಯಮದವರಿಗೆ ಅವಕಾಶ ನೀಡಬೇಕು ಎಂದು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪುತ್ತೂರು ತಾಲೂಕು ಸಮಿತಿ ವತಿಯಿಂದ ದ.ಕ.ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಜಿಲ್ಲಾಧಿಕಾರಿಯವರು, ವಾರ್ತಾಧಿಕಾರಿಯವರು ಮತ್ತು ಲೋಕೋಪಯೋಗಿ ಇಲಾಖಾ ಅಧಿಕಾರಿಗಳಿಗೆ ಮಂಗಳೂರಿನಲ್ಲಿ ಮನವಿ ಸಲ್ಲಿಸಲಾಗಿದೆ.

ಯೂನಿಯನ್ ತಾಲೂಕು ಸಮಿತಿಯ ಅಧ್ಯಕ್ಷ ಸಂತೋಷ್ ಕುಮಾರ್ ಶಾಂತಿನಗರ, ಪ್ರಧಾನ ಕಾರ್ಯದರ್ಶಿ ಗಣೇಶ್ ಕೆ, ಉಪಾಧ್ಯಕ್ಷ ರಾಮದಾಸ್ ಶೆಟ್ಟಿ ವಿಟ್ಲ, ಜಿಲ್ಲಾ ಸಮಿತಿ ಕೋಶಾಧಿಕಾರಿ ಜ್ಯೋತಿಪ್ರಕಾಶ್ ಪುಣಚ ಮತ್ತು ಫಾರೂಕ್ ಶೇಖ್ ಮುಕ್ವೆರವರು ಮನವಿ ಸಲ್ಲಿಸಿದ ನಿಯೋಗದಲ್ಲಿದ್ದರು. ಯೂನಿಯನ್ ಜಿಲ್ಲಾ ಸಮಿತಿಯ ಸಭೆಯಲ್ಲಿ ಜಿಲ್ಲಾಧ್ಯಕ್ಷ ಹರೀಶ್ ಬಂಟ್ವಾಳ್, ಉಪಾಧ್ಯಕ್ಷ ಲಕ್ಷ್ಮಣ ಕುಂದರ್ ಮತ್ತು ಪ್ರಧಾನ ಕಾರ್ಯದರ್ಶಿ ತಾರನಾಥ ಗಟ್ಟಿ ಕಾಪಿಕಾಡ್ ರವರ ಉಪಸ್ಥಿತಿಯಲ್ಲಿ ಈ ಹಿಂದಿನ ಸಭೆಯಲ್ಲಿ ಅನುಮೋದನೆ ಪಡೆದ ಪ್ರಕಾರ ಮನವಿ ಸಲ್ಲಿಸಿ ಸ್ವೀಕೃತಿ ಪಡೆಯಲಾಯಿತು.‌ಮನವಿಯ ಪ್ರತಿಯನ್ನು ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೂ ಸಲ್ಲಿಸಲಾಯಿತು.‌

ಪುತ್ತೂರು ತಾಲೂಕಿನಲ್ಲಿ ಇದೀಗ ಇಂಡಿಯನ್ ಜರ್ನಲಿಸ್ಟ್ ಯೂನಿಯನ್ ಜತೆ ಸಂಯೋಜನೆಗೊಂಡಿರುವ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪುತ್ತೂರು ತಾಲೂಕು ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಗಿದೆ. ಮುದ್ರಣ ಮಾಧ್ಯಮ, ದೃಶ್ಯ ಮಾಧ್ಯಮ ಮತ್ತು ವೆಬ್ ಮಾಧ್ಯಮದ ಹಲವಾರು ಸದಸ್ಯರು ಈ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಪತ್ರಕರ್ತರು ಕೂಡ ಸಮಾಜದ ಮುಖ್ಯ ವಾಹಿನಿಯಲ್ಲಿರಬೇಕೆಂಬುದು ನಮ್ಮ ಸಂಘಟನೆಯ ಅಭಿಲಾಷೆಯಾಗಿದೆ. ಪತ್ರಕರ್ತರಿಗೆ ಸರಕಾರದಿಂದ ದೊರಕುವ ಸವಲತ್ತುಗಳನ್ನು ಒದಗಿಸಿಕೊಡುವುದು ಹಾಗೂ ಪತ್ರಕರ್ತರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಒದಗಿಸಿಕೊಡಲು ಪ್ರಯತ್ನಿಸುವುದು ನಮ್ಮ ಸಂಘಟನೆಯ ಆದ್ಯತೆಯಾಗಿದೆ.

ಆದುದರಿಂದ ನಮ್ಮ ಪತ್ರಕರ್ತರ ಸಂಘಟನೆಗಳ ಕಾರ್ಯ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಬೆಳೆಸಲು ತಮ್ಮ ಅಮೂಲ್ಯವಾದ ಸಹಕಾರ ಬೇಕಿದೆ. ಇದಕ್ಕೆ ಬಹುಮುಖ್ಯವಾಗಿ ಪುತ್ತೂರಿನಲ್ಲಿ ಈಗಾಗಲೇ ಲೋಕೋಪಯೋಗಿ ಇಲಾಖೆಯ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪತ್ರಿಕಾ ಭವನದಲ್ಲಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪುತ್ತೂರು ತಾಲೂಕು ಸಮಿತಿಗೂ ಅವಕಾಶ ಕಲ್ಪಿಸಲು ತಾವು ಕ್ರಮ ಕೈಗೊಳ್ಳಬೇಕಿದೆ.

ಇದಕ್ಕೆ ಪೂರಕವಾಗಿ ಪತ್ರಿಕಾ ಭವನದಲ್ಲಿ ನಡೆಯವ ಪತ್ರಿಕಾಗೋಷ್ಠಿ ಮುಂತಾದ ಎಲ್ಲಾ ಕಾರ್ಯಕ್ರಮಗಳಿಗೆ ನಮ್ಮ ಪತ್ರಕರ್ತರ ಸಂಘಟನೆಗೆ ಆಹ್ವಾನ ನೀಡುವಂತೆ, ಈ ಮೇಲೆ ಉಲ್ಲೇಖಿಸಿರುವ ಪತ್ರಕರ್ತರ ಸಂಘಟನೆಯ ಸಭೆ, ವ್ಯವಹಾರ ಮತ್ತು ಅದರ ಸದಸ್ಯರಿಗೆ ತಮ್ಮತಮ್ಮ ಮಾಧ್ಯಮಕ್ಕೆ ಸಂಬಂಧಿಸಿದ ವರದಿಗಾರಿಕೆಗೆ ಹಾಗೂ ಕಾರ್ಯಚಟುವಟಿಕೆಗಳನ್ನು ನಡೆಸಲು ಸದ್ರಿ ಪತ್ರಿಕಾ ಭವನದಲ್ಲಿ ಸ್ಥಳಾವಕಾಶ ದೊರಕಿಸಿ ಕೊಡುವಂತೆ ಹಾಗೂ ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಜತೆ ಜತೆಯಾಗಿ ಸೌಹಾರ್ದತೆಯಿಂದ ಕಾರ್ಯ ನಿರ್ವಹಿಸಲು ಹಾಗೂ ಇತರ ಮಾಧ್ಯಮದ ಸಂಘಟನೆಗಳೊಂದಿಗೆ ಸೌಹಾರ್ದತೆಯಿಂದ ಕಾರ್ಯ ನಿರ್ವಹಿಸಲು ಅಗತ್ಯವಿರುವ ಕ್ರಮ ಕೈಗೊಂಡು ಎಲ್ಲಾ ಪತ್ರಕರ್ತರು ಒಗ್ಗೂಡಿ ಕಾರ್ಯ ನಿರ್ವಹಿಸಲು ಅವಕಾಶ ಕಲ್ಪಿಸುವಂತೆ ತಮ್ಮಲ್ಲಿ ವಿನಂತಿಸುತ್ತಿದ್ದೇವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಸಚಿವರಿಗೆ ಮತ್ತು ಸಂಸದರಿಗೆ ಅವರ ಕಛೇರಿ ಮೂಲಕ ಮನವಿ ಸಲ್ಲಿಸಲಾಗಿದ್ದು ಅಧಿಕಾರಿಗಳಿಗೆ ಇಲಾಖಾ ಕಛೇರಿಯಲ್ಲಿ ಮನವಿ ಸಲ್ಲಿಸಲಾಗಿದೆ. ಇದೇ ಮನವಿಯನ್ನು ಪುತ್ತೂರಿನಲ್ಲಿ ಶಾಸಕರಿಗೆ, ಸಹಾಯಕ ಆಯುಕ್ತರಿಗೆ ಮತ್ತು ಲೋಕೋಪಯೋಗಿ ಇಲಾಖೆಗೆ ಮನವಿ ನೀಡಲಾಗುವುದು ಎಂದು ಸಂತೋಷ್ ಕುಮಾರ್ ಶಾಂತಿನಗರ ಮತ್ತು ಗಣೇಶ್ ಕೆ.ರವರು ತಿಳಿಸಿದ್ದಾರೆ.

ಪತ್ರಿಕಾ ಭವನದ ಕುರಿತು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪುತ್ತೂರು ತಾಲೂಕು ಸಮಿತಿಯವರು ನೀಡಿದ ಮನವಿಯ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.ರವರು ತಿಳಿಸಿದ್ದಾರೆ.


ಮನವಿ ಸ್ವೀಕರಿಸಿದ ಬಳಿಕ ಮಾತನಾಡಿದ ಜಿಲ್ಲಾಧಿಕಾರಿಯವರು ಮಾಹಿತಿ ಅಧಿಕಾರಿಯ ಮೂಲಕ ಸೂಕ್ತ ಮಾಹಿತಿ ಪಡೆಯಲಾಗುವುದು.‌ ತಾಲೂಕಿನ ಎಲ್ಲಾ ಪತ್ರಕರ್ತರ ಸಂಘಟನೆಗಳಿಗೆ ಮತ್ತು ಎಲ್ಲಾ ಮಾಧ್ಯಮಗಳ ಪ್ರತಿನಿಧಿಗಳಿಗೆ ಪತ್ರಿಕಾ ಭವನದಲ್ಲಿ ಅವಕಾಶ ನೀಡುವ ಬಗ್ಗೆ ಸೂಕ್ತ ಸ್ಪಂದನ‌ ನೀಡುವ ಬಗ್ಗೆ ಪರಿಶೀಲನೆ ನಡೆಸುತ್ತೇನೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ವಾರ್ತಾ ಇಲಾಖೆ ಸಹಿತ ಸಂಬಂಧಪಟ್ಟ ಅಧಿಕಾರಿಗಳೊಂದಿಗೂ ಈ ಬಗ್ಗೆ ಚರ್ಚಿಸುತ್ತೇನೆ ಎಂದು ಜಿಲ್ಲಾಧಿಕಾರಿಯವರು ಈ ವೇಳೆ ತಿಳಿಸಿದರು.

ಸಂಬಂಧಿಸಿದ ಅಧಿಕಾರಿಗಳ ಜತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಂಡು ತಮಗೆ ಕೂಡಲೇ ಮಾಹಿತಿ ನೀಡುತ್ತೇನೆ ಎಂದು ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ತಿಳಿಸಿದ್ದಾರೆ.

- Advertisement -

Related news

error: Content is protected !!