ಕಾಸರಗೋಡು: ದರೋಡೆಗೆ ಸಂಚು ಮಾಡಿತ್ತಿದ್ದ ದರೋಡೆಕೋರರ ತಂಡವನ್ನು ಸ್ಥಳೀಯರ ಸಹಾಯದಿಂದ ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ ಘಟನೆ ವರ್ಕಾಡಿ ಸಮೀಪದ ಮಜೀರ್ ಪಳ್ಳದಲ್ಲಿ ನಡೆದಿದೆ.
ಬಂಧಿತರನ್ನು ಉಳ್ಳಾಲದ ಫೈಝಲ್ ಮತ್ತು ತುಮಕೂರಿನ ಶಹೀದ್ ಅಮಾನ್ ಎಂದು ಗುರುತಿಸಲಾಗಿದೆ. ನಾಲ್ವರು ಪರಾರಿಯಾಗಿದ್ದಾರೆ.
ಆರೋಪಿಗಳು ಬ್ಯಾಂಕ್ ದರೋಡೆಗೆ ಬಂದಿದ್ದರು ಎಂದು ಪೋಲೀಸರ ತನಿಖೆಯಿಂದ ತಿಳಿದುಬಂದಿದೆ. ಇಂದು ಮುಂಜಾನೆ ಮೂರು ಗಂಟೆ ಸುಮಾರಿಗೆ ಸಂಶಯಾಸ್ಪದವಾಗಿ ಕಂಡು ಬಂದ ಇವರನ್ನು ಗಸ್ತು ತಿರುಗುತ್ತಿದ್ದ ಮಂಜೇಶ್ವರ ಪೊಲೀಸರು ಕಾರನ್ನು ನಿಲ್ಲಿಸಿ ವಿಚಾರಿಸಿದ್ದಾರೆ. ಈ ವೇಳೆ ನಾಲ್ವರು ಪರಾರಿಯಾಗಿದ್ದು, ಇಬ್ಬರನ್ನು ಸ್ಥಳೀಯರ ಸಹಾಯದಿಂದ ಪೊಲೀಸರು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳನ್ನು ಸೆರೆ ಹಿಡಿಯುವ ಮಧ್ಯೆ ಪೊಲೀಸರು ಮತ್ತು ದರೋಡೆಕೋರರ ನಡುವೆ ಹೊಡೆದಾಟ ನಡೆದಿದೆ. ಗಾಯಗೊಂಡ ಇಬ್ಬರು ದರೋಡೆಕೋರರನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪರಾರಿಯಾದವರ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದ್ದು ಇವರಿಗಾಗಿ ಶೋಧ ನಡೆಯುತ್ತಿದೆ.
ಕಾರಿನಲ್ಲಿ ಗ್ಯಾಸ್ ಕಟ್ಟರ್, ಸಿಲಿಂಡರ್ ಮೊದಲಾದವುಗಳು ಪತ್ತೆಯಾಗಿದ್ದು, ವಶಕ್ಕೆ ಪಡೆಯಲಾಗಿದೆ. ಬ್ಯಾಂಕ್ ಸೇರಿದಂತೆ ಹಲವು ದರೋಡೆಗೆ ಇವರು ಹೊಂಚು ಹಾಕುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಮಂಜೇಶ್ವರ ಠಾಣಾ ವ್ಯಾಪ್ತಿ ಸೇರಿದಂತೆ ಹಲವೆಡೆ ಕಳೆದ ಕೆಲ ದಿನಗಳಿಂದ 15 ಕ್ಕೂ ಅಧಿಕ ಕೃತ್ಯಗಳು ನಡೆದಿದ್ದು, ಈ ಕೃತ್ಯಗಳಲ್ಲಿ ಈ ತಂಡ ಶಾಮೀಲಾಗಿದೆಯೇ ಎಂಬ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.