ಕೇರಳ: ದೇವರನಾಡು ಕೇರಳದ ಮುನ್ನಾರ್ ನಲ್ಲಿ ಪೆಟ್ಟಿಮುಡಿ ಬೆಟ್ಟ ಕುಸಿದು ಐವರು ಮೃತಪಟ್ಟಿದ್ದಾರೆ. ಸುಮಾರು 80ಕ್ಕೂ ಅಧಿಕ ಮಂದಿ ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ.

ಕೇರಳ ರಾಜ್ಯದ ಇಡುಕ್ಕಿ ಜಿಲ್ಲೆಯ ಮುನ್ನಾರ್ ನ ರಾಜಮಲಾದಲ್ಲಿ ಇಂದು ಬೆಳಗ್ಗಿನ ಜಾವ ಈ ಘಟನೆ ಸಂಭವಿಸಿದೆ. ಭೂಕುಸಿತಕ್ಕೆ ಕ್ವಾರ್ಟರ್ಸ್ ಮತ್ತು ಚರ್ಚ್ ಕಟ್ಟಡ ಧರೆಗುರುಳಿ ಸುಮಾರು 80 ಮಂದಿ ಸಿಕ್ಕಿಹಾಕಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಇದುವರೆಗೆ ಐವರ ಶವಗಳನ್ನು ಮಣ್ಣಿನಡಿಯಿಂದ ಹೊರತೆಗೆಯಲಾಗಿದೆ.

ಭಾರೀ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ಅವಶೇಷಗಳಡಿಯಲ್ಲಿ ಸಿಕ್ಕಿಹಾಕಿಕೊಂಡವರನ್ನು ಬೇಗನೆ ಹೊರತೆಗೆಯಲು ಸಾಧ್ಯವಾಗುತ್ತಿಲ್ಲ. ಇದುವರೆಗೆ ಮಣ್ಣಿನಡಿಯಲ್ಲಿ ಸಿಲುಕಿದ್ದ 10 ಮಂದಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಕ್ಕಿಹಾಕಿಕೊಂಡವರಲ್ಲಿ ಬಹುತೇಕರು ಟೀ ಎಸ್ಟೇಟ್ ನಲ್ಲಿ ಕೆಲಸ ಮಾಡುವ ಕಾರ್ಮಿಕರಾಗಿದ್ದಾರೆ. ಇಂದು ನಸುಕಿನ ಜಾವ ಈ ದುರಂತ ಸಂಭವಿಸಿದ್ದರಿಂದ ನಿದ್ದೆಯಲ್ಲಿದ್ದ ಜನರಿಗೆ ಅಪಾಯದಿಂದ ಪಾರಾಗಲು ಸಾಧ್ಯವಾಗಲಿಲ್ಲ.

ಇನ್ನು ಭಾರೀ ಮಳೆಯಿಂದಾಗಿ ಇಲ್ಲಿನ ಸೇತುವೆ ನೀರಿನಲ್ಲಿ ಕೊಚ್ಚಿ ಹೋಗಿದ್ದರಿಂದ ರಕ್ಷಣಾ ಸಿಬ್ಬಂದಿಗೆ ಸ್ಥಳಕ್ಕೆ ಬೇಗನೆ ಸ್ಥಳಕ್ಕೆ ಧಾವಿಸಲು ಸಾಧ್ಯವಾಗಿಲ್ಲ ಸದ್ಯ ಸ್ಥಳದಲ್ಲಿ ಅಗ್ನಿಶಾಮಕ ಮತ್ತು ರಕ್ಷಣಾ ಪಡೆ ಸಿಬ್ಬಂದಿ, ಎನ್ ಡಿಆರ್ ಎಫ್, ಕಂದಾಯ ಇಲಾಖೆ ಅಧಿಕಾರಿಗಳು, ಪೊಲೀಸರು ಅವಶೇಷಗಳಡಿ ಸಿಲುಕಿರುವವರನ್ನು ಹೊರತೆಗೆಯುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಮುನ್ನಾರ್ ದುರಂತದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇರಳ ಮುಖ್ಯಮಂತ್ರಿ ಪಿನರಾಯಿ ವಿಜಯನ್, ಇಡುಕ್ಕಿಯ ಮುನ್ನಾರ್ ಹತ್ತಿರ ರಾಜಮಾಲಾದಲ್ಲಿ ಉಂಟಾಗಿರುವ ಭೂಕುಸಿತದಲ್ಲಿ ಅವಶೇಷಗಳಡಿಯಲ್ಲಿ ಸಿಕ್ಕಿಹಾಕಿಕೊಂಡವರ ರಕ್ಷಣಾ ಕಾರ್ಯ ಮಾಡಲಾಗುತ್ತಿದೆ. ಪರಿಹಾರ ಕಾರ್ಯಕ್ಕೆ ಹೆಲಿಕಾಪ್ಟರ್ ಸೇವೆ ಪಡೆಯಲು ಭಾರತೀಯ ವಾಯುಪಡೆಯನ್ನು ಸಂಪರ್ಕಿಸಲಾಗಿದೆ ಎಂದು ತಿಳಿಸಿದರು.
